ಬೆಂಗಳೂರು: ರಾಜ್ಯದ ಪ್ರೀ ಮೆಟ್ರಿಕ್ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಎನ್ನುವಂತೆ ವಿದ್ಯಾರ್ಥಿ ವೇತನವನ್ನು ರೂ.750ರಿಂದ ರೂ.1,750ಕ್ಕೆ ಹೆಚ್ಚಳ ಮಾಡಲಾಗಿದೆ ಎಂಬುದಾಗಿ ಸಿಎಂ ಸಿದ್ಧರಾಮಯ್ಯ ತಿಳಿಸಿದ್ದಾರೆ.
ಈ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಮಾತನಾಡಿದ ಅವರು, ನಮ್ಮ ಸಂವಿಧಾನ ಜಾರಿಯಾಗುವ ಮೊದಲೇ ಮೈಸೂರು ರಾಜ್ಯದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತದಲ್ಲಿ ಮೀಸಲಾತಿಯನ್ನು ಜಾರಿಗೆ ತರಲಾಗಿತ್ತು.
1960 ರಲ್ಲಿ ನಾಗೇಗೌಡ ಸಮಿತಿ ರಚನೆಯಾಯಿತು. ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹಾವನೂರು ಆಯೋಗ ರಚಿಸಲಾಯಿತು. ವರದಿಗೆ ವಿರೋಧದ ನಡುವೆಯೂ ಜಾರಿಗೆ ತರಲಾಯಿತು. 1977 ರಲ್ಲಿ ಹಿಂದುಳಿದ ವರ್ಗಗಳ ಮಕ್ಕಳಿಗೆ ವಿದ್ಯಾರ್ಥಿ ನಿಲಯಗಳನ್ನು ಪ್ರಾರಂಭಿಸಲಾಯಿತು. ವಿದ್ಯಾರ್ಥಿನಿಲಯಗಳಲ್ಲಿ ಶೇ.75 ರಷ್ಟು ಹಿಂದುಳಿದ ಜಾತಿಗಳ ಮಕ್ಕಳಿದ್ದರೆ, ಶೇ.25 ರಷ್ಟು ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಠ ಪಂಗಡದ ಮಕ್ಕಳಿದ್ದಾರೆ. 1,87,000 ವಿದ್ಯಾರ್ಥಿಗಳು ಇಂದು ವಿದ್ಯಾರ್ಥಿನಿಲಯಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಎಂದರು.
ವಿದ್ಯಾರ್ಥಿ ನಿಲಯಗಳಲ್ಲಿ ಪೌಷ್ಟಿಕ ಆಹಾರ ದೊರಕಿಸುವ ಉದ್ದೇಶದಿಂದ ಪ್ರೀಮೆಟ್ರಿಕ್ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನವನ್ನು ಹೆಚ್ಚಳ ಮಾಡಿದೆ. ಹೀಗೆ ಐದು ವರ್ಷವೂ ಕೂಡ ವಿದ್ಯಾರ್ಥಿ ವೇತನವನ್ನು ಹಂತ ಹಂತವಾಗಿ ಹೆಚ್ಚಿಸಲಾಗಿ, ಮುಂಚೆ ಇದ್ದ 750 ರೂ ವಿದ್ಯಾರ್ಥಿ ವೇತನವನ್ನು 1750 ರೂ.ಗಳಿಗೆ ಹೆಚ್ಚಿಸಲಾಗಿದೆ. ಹಾಸ್ಟೆಲ್ ಗಳಲ್ಲಿ ಇರುವ ವಿದ್ಯಾರ್ಥಿಗಳಿಗೆ ಪೌಷ್ಟಿಕ ಆಹಾರ ಲಭಿಸಿದಾಗ ಮಾತ್ರ ಉತ್ತಮ ಜ್ಞಾನಾರ್ಜನೆ ಮಾಡಲು ಸಾಧ್ಯ. 2024-25 ರಲ್ಲಿಯೂ ಕೂಡ ವಿದ್ಯಾರ್ಥಿ ವೇತನವನ್ನು 1850 ರೂ.ಗಳಿಗೆ ಪುನ: ಹೆಚ್ಚಿಸಲಾಗಿದೆ ಎಂದು ವಿವರಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

