ಹುಬ್ಬಳ್ಳಿ: ರಾಜ್ಯದಲ್ಲಿ ನಡೆಯುವ ರೈಲ್ವೆ ಯೋಜೆನಗಳ ಸಂಪೂರ್ಣ ವೆಚ್ಚವನ್ನು ರೈಲ್ವೆ ಇಲಾಖೆಯೇ ಭರಿಸಲಿದೆ. ಆದರೆ ಯೋಜನೆಗೆ ಬೇಕಾದ ಭೂಮಿಯನ್ನು ಸಕಾಲಕ್ಕೆ ಕೊಡುವುದು ರಾಜ್ಯ ಸರಕಾರದ ಕರ್ತವ್ಯವಾಗಿದೆ ಎಂದು ರೈಲ್ವೆ ಖಾತೆ ಸಹಾಯಕ ಸಚಿವ ವಿ.ಸೋಮಣ್ಣ ತಿಳಿಸಿದರು.
ನೈಋತ್ಯ ರೈಲ್ವೆ ವಲಯದ ಹಿಂದಿನ, ಹೊಸ ಯೋಜನೆಗಳು ಹಾಗೂ ಈ ಭಾಗದ ಪ್ರಮುಖ ಬೇಡಿಕೆಗಳ ಕುರಿತು ಅಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರ ಸಭೆಯ ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದ ವಿ ಸೋಮಣ್ಣ ಅವರು, ರಾಜ್ಯ ಸರಕಾರ ಇನ್ನು ಮುಂದೆ ಸಕಾಲಕ್ಕೆ ಯೋಜನೆಗೆ ಸಂಬಂಧಿಸಿದ ಭೂಮಿ ನೀಡಿದರೆ ಸಾಕು. ಹಿಂದಿನ ಕಾರ್ಯವೈಖರಿ ಹೇಗಿತ್ತೋ ಗೊತ್ತಿಲ್ಲ. ನಾನು ಬಂದ ಮೇಲೆ ರಾಜ್ಯದ ಯೋಜನೆಗಳಿಗೆ ವೇಗ ಹೆಚ್ಚಿಸುವ ಕೆಲಸ ಮಾಡಿದ್ದೇನೆ. ನಾಲ್ಕು ತಿಂಗಳಿಗೊಮ್ಮೆ ನೈಋತ್ಯ ರೈಲ್ವೆ ವಲಯದ ಸಭೆ ಮಾಡಲಾಗುವುದು ಎಂದರು.
ರಾಜ್ಯದ ಯೋಜನೆಗಳ ಕುರಿತಾಗಿ ನಾಲ್ಕು ಬಾರಿ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡಿದ್ದೇನೆ. ಮುಖ್ಯಮಂತ್ರಿಗಳು ತಕ್ಷಣ ರೈಲ್ವೆ ಇಲಾಖೆಗೆ ಅಗತ್ಯವಿರುವ ಭೂಮಿ ನೀಡುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ರೈಲ್ವೆ ಯೋಜನೆಗಳಿಗೆ ಸಂಬಂಽಸಿದಂತೆ ರಾಜ್ಯ ಸರಕಾರದಿಂದ ಸಕರಾತ್ಮಕ ಸಹಕಾರ ದೊರೆತಿದೆ. ವಿನಾಕಾರಣ ಇನ್ನೊಂದು ಸರಕಾರದ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ.
ನೈರುತ್ಯ ರೈಲ್ವೆ ಯೋಜನೆಯಲ್ಲಿನ ನಡೆಯುತ್ತಿರುವ 11 ಯೋಜನೆಗಳನ್ನು 2027 ರೊಳಗೆ ಪೂರ್ಣಗೊಳಿಸಲಾಗುವುದು. ತುಮಕೂರು-ರಾಯದುರ್ಗ, ತುಮಕೂರು-ದಾವಣಗೆರೆ, ಗದಗ-ವಾಡಿ, ಶಿವಮೊಗ್ಗ-ಶಿಕಾರಿಪುರ- ರಾಣೆಬೆನ್ನೂರು, ಬಾಗಲಕೋಟೆ-ಕುಡಚಿ ಸೇರಿದಂತೆ 11 ಯೋಜನೆಗಳಿವೆ. ಹುಬ್ಬಳ್ಳಿ-ಧಾರವಾಡ- ಕಿತ್ತೂರು-ಬೆಳಗಾವಿ ಮಾರ್ಗಕ್ಕೆ ಒತ್ತು ನೀಡಲಾಗುವುದು. ಡಿಸೆಂಬರ್-೨೦೨೪ ರೊಳಗೆ ಭೂ ಸ್ವಾಧೀನ ಪಡೆಸಿಕೊಂಡು ರೈಲ್ವೆ ಇಲಾಖೆಗೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದಾರೆ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





