ಸವದತ್ತಿ: ತಾಲ್ಲೂಕಿನ ಯಲ್ಲಮ್ಮ ದೇವಸ್ಥಾನದಲ್ಲಿ ಪ್ರವಾಸೋದ್ಯಮ ಇಲಾಖೆ ನಿರ್ಮಿಸಿರುವ ವಿವಿಧ ಕಟ್ಟಡಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಯಲ್ಲಮ್ಮನಗುಡ್ಡಕ್ಕೆ ಆಗಮಿಸುತ್ತಿದ್ದು, ಶನಿವಾರ ತಾಲ್ಲೂಕು ಆಡಳಿತ ಭರದ ಸಿದ್ಧತೆ ನಡೆಸಿತು.
ವಸತಿ ಸಂಕೀರ್ಣ, ತಂಗುದಾಣ, ಶೌಚಾಲಯ ಸೇರಿದಂತೆ ವಿವಿಧ ಕಟ್ಟಡಗಳ ಲೋಕಾರ್ಪಣೆ ನಡೆಯಲಿದೆ. ಯಲ್ಲಮ್ಮನಗುಡ್ಡದ ಬಸ್ ನಿಲ್ದಾಣದಲ್ಲಿ ಭವ್ಯ ವೇದಿಕೆ ನಿರ್ಮಿಸಲಾಗಿದೆ.
ದೇವಿಯ ದರ್ಶನಕ್ಕೆ ಆಗಮಿಸುವ ಸಿದ್ದರಾಮಯ್ಯ ಅವರನ್ನು ಮಂಗಳವಾದ್ಯ ಹಾಗೂ ವೇದಘೋಷಗಳ ಮೂಲಕ ಸ್ವಾಗತಿಸಲಾಗುವುದು. ನಂತರ ವಿವಿಧ ಕಟ್ಟಡಗಳನ್ನು ವೀಕ್ಷಿಸಿ, ವೇದಿಕೆ ಸಮಾರಂಭಕ್ಕೆ ಚಾಲನೆ ನೀಡುವರು ಎಂದು ಶಾಸಕ ವಿಶ್ವಾಸ್ ವೈದ್ಯ ತಿಳಿಸಿದ್ದಾರೆ.
ಯಲ್ಲಮ್ಮ ದೇವಸ್ಥಾನದಲ್ಲಿ ಮೂಲಸೌಕರ್ಯ ಕೊರತೆ ಇತ್ತು ಸೌಕರ್ಯದ ಜೊತೆಗೆ ಮಾದರಿ ಕ್ಷೇತ್ರವನ್ನಾಗಿಸುವ ಗುರಿಯೊಂದಿಗೆ ಪ್ರವಾಸೋದ್ಯಮ ಹಾಗೂ ಆಡಳಿತದ ಎರಡು ಪ್ರಾಧಿಕಾರಗಳನ್ನು ರಚಿಸಲಾಗಿದೆ. ಸಮಾರಂಭಕ್ಕೂ ಮೊದಲು ಪ್ರಾಧಿಕಾರಗಳ ಸಭೆಯು ಮುಖ್ಯಮಂತ್ರಿ ನೇತೃತ್ವದಲ್ಲಿ ಜರುಗಲಿದೆ.
ಅ.13ರಂದು ಮಧ್ಯಾಹ್ನ 1.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ₹21 ಕೋಟಿ ವೆಚ್ಚದಲ್ಲಿ ಪೂರ್ಣಗೊಂಡ ವಿವಿಧ ಕಾಮಗಾರಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸುವರು. 3.30ಕ್ಕೆ ಧಾರವಾಡಕ್ಕೆ ರಸ್ತೆ ಮೂಲಕ ತೆರಳುವರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಪಾಲ್ಗೊಳ್ಳಲಿದ್ದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಶಾಸಕ ವಿಶ್ವಾಸ ವೈದ್ಯ ಅಧ್ಯಕ್ಷತೆ ವಹಿಸುವರು. ಜಿಲ್ಲೆಯಸಂಸದರು ಶಾಸಕರು ಭಾಗಿಯಾಗಲಿದ್ದು 10 ಸಾವಿರಕ್ಕೂ ಅಧಿಕ ಜನ ಸೇರಬಹುದೆಂದು ನಿರೀಕ್ಷಿಸಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

