ಹುಬ್ಬಳ್ಳಿ : ಬೈಕ್ ಟಚ್ ಆದ ವಿಚಾರಕ್ಕೆ ದಾಯಾದಿಗಳ ನಡುವೆ ಮಾತಿಗೆ ಮಾತು ಬೆಳೆದು ಸಿದ್ದಾರ್ಥ ಎಂಬಾತನ ಮೇಲೆ ಇಟ್ಟಿಗೆಯಿಂದ ಹಲ್ಲೆ ನಡೆಸಿದ ಪರಿಣಾಮ ಯುವಕನ ತಲೆಗೆ ಗಂಭೀರ ಗಾಯವಾದ ಘಟನೆ ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಕೆಬಿ ನಗರದಲ್ಲಿ ನಡೆದಿದೆ.
ಸಿದ್ದಾರ್ಥ ಎಂಬ ಯುವಕ ಅಕ್ಕಿ ಹೊಂಡ ಬಳಿಯಲ್ಲಿ ಬೈಕ್ ತೆಗೆಯುತ್ತಿದ್ದಾಗ ಈತನ ಸಂಬಂಧಿಯಾದ ಪ್ರಭು ಎಂಬಾತ ಪಲ್ಸರ್ ಬೈಕ್‌ನಲ್ಲಿ ಬಂದು ಈತನ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾನೆ. ಆಗ ಸಿದ್ದಾರ್ಥ್‌ನನ್ನ ಬೈಕ್‌ಗೆ ಯಾಕೆ ಡಿಕ್ಕಿ ಹೊಡೆದೆ? ಎಂದು ಪ್ರಶ್ನೆ ಮಾಡಿದ್ದಕ್ಕೆ ಆತನಿಗೆ ಅವಾಚ್ಯವಾಗಿ ನಿಂದಿಸಿ, ಕಪಾಳಕ್ಕೆ ಹೊಡೆದು ಹೋಗಿದ್ದಾನೆ.
ಆದ್ರೆ ಮಾರನೇ ದಿನ ಮತ್ತೆ ಸಿದ್ದಾರ್ಥ ಕೆಬಿ ನಗರದ ದುರ್ಗಾ ದೇವಿಯ ಪಲ್ಲಕ್ಕಿ ಉತ್ಸವ ನೋಡಲು ಹೋದಾಗ ಸಿದ್ದಾರ್ಥ ಜೊತೆ ಪ್ರಭು, ಸಂಜು ಮತ್ತು ಶೋಭಾ ಎಂಬುವರು ಜಗಳ ತೆಗೆದು ಅಲ್ಲೆ ಇದ್ದ ಇಟ್ಟಿಗೆಯಿಂದ ಸಿದ್ದಾರ್ಥನ ತಲೆಗೆ ಹೊಡೆದಿದ್ದಾರೆ. ಇದರಿಂದ ಸಿದ್ದಾರ್ಥನ ತಲೆ ಒಡೆದಿದೆ.
ಕೂಡಲೇ ಗಾಯಾಳು ಸಿದ್ದಾರ್ಥನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಪಡೆದು ನಂತರ ಹಲ್ಲೆ ನಡೆಸಿದ ಮೂವರ ವಿರುದ್ಧ ಬೆಂಡಿಗೇರಿ ಪೊಲೀಸ್ ಠಾಣೆಗೆ ಸಿದ್ಧಾರ್ಥ ದೂರು ನೀಡಿದ್ದಾನೆ. ಸದ್ಯ ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ
bigtvnews | Hubli Dharwad News | Kannada News | Karnataka News Hubli News | News In Hubli | Local news

