ಗುಂಡ್ಲುಪೇಟೆ: ನಾಡಹಬ್ಬ ದಸರಾ ಹಾಗೂ ವಾರಾಂತ್ಯದ ಸಾಲು ಸಾಲು ರಜೆಗಳ ಹಿನ್ನೆಲೆಯಲ್ಲಿ ತಾಲ್ಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಸಫಾರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದು, ಬೆಂಗಳೂರು ಸೇರಿದಂತೆ ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಸಾವಿರಾರು ಸಂಖ್ಯೆಯ ಪ್ರವಾಸಿಗರು ಬಂಡಿಪುರಕ್ಕೆ ಭೇಟಿ ನೀಡಿದ್ದ ಹಿನ್ನೆಲೆಯಲ್ಲಿ ಸಫಾರಿ ಅವರಣ ತುಂಬಿ ತುಳುಕುತ್ತಿತ್ತು.
ತಾಲ್ಲೂಕಿನಲ್ಲಿ ಪ್ರಸಿದ್ದ ಧಾರ್ಮಿಕ ಕ್ಷೇತ್ರವಾದ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಹಾಗೂ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದಲ್ಲಿ ಸಫಾರಿಗೆ ಅವಕಾಶವಿದ್ದು ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಹಲವು ಪಟ್ಟು ಹೆಚ್ಚು ಪ್ರವಾಸಿಗರು ಭಾನುವಾರ ಕಂಡುಬಂದರು. ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಪ್ರವಾಸಿಗರ ವಾಹನಗಳು ಸಾಲುಗಟ್ಟಿ ನಿಂತಿದ್ದ ದೃಶ್ಯಗಳು ಕಂಡುಬಂದಿತು.
ಹಿಮವದ್ ಗೋಪಾಲಸ್ವಾಮಿ ಬೆಟ್ಟ ಹಾಗೂ ಬಂಡಿಪುರದಲ್ಲಿ ಅರಣ್ಯ ಸೌಂದರ್ಯ ಹಾಗೂ ಕಾಡುಪ್ರಾಣಿಗಳ ವೀಕ್ಷಣೆ ಮಾಡಲು ಪ್ರವಾಸಿಗರು ಸಫಾರಿ ಟಿಕೆಟ್‌ಗಾಗಿ ಗಂಟೆಗಳ ಕಾಲ ಸರದಿ ಸಾಲಿನಲ್ಲಿ ನಿಂತು ಟಿಕೆಟ್ ಖರೀದಿಸಿದರು. ಬಳಿಕ ಸಫಾರಿ ವಾಹನಗಳನ್ನೇರಿ ತುಂತರು ಮಳೆಯ ಸಿಂಚನದ ಜೊತೆಗೆ ಹಸಿರಿನಿಂದ ಕಂಗೊಳಿಸುತ್ತಿರುವ ಕಾಡಿನ ಸೌಂದರ್ಯದ ಜೊತೆಗೆ ಕಾಡುಪ್ರಾಣಿಗಳನ್ನು ವೀಕ್ಷಣೆ ಮಾಡಿದರು. ಸಫಾರಿ ವೇಳೆ ಕೆಲವರಿಗೆ ಹುಲಿ ದರ್ಶನವಾಗಿದ್ದು ವಿಶೇಷವಾಗಿತ್ತು.
bigtvnews | Hubli Dharwad News | Kannada News | Karnataka News Hubli News | News In Hubli | Local news

