ವಿಜಯಪುರ: ನೀಟ್ ಪರೀಕ್ಷೆ ಉತ್ತೀರ್ಣರಾಗಿ ಸರ್ಕಾರಿ ಕೋಟಾದಡಿ ಎಂಬಿಬಿಎಸ್ ಸೀಟ್ ಪಡೆದರೂ ಶುಲ್ಕ ಭರಿಸಲಾಗದೆ ಹಣದ ಸಮಸ್ಯೆ ಎದುರಿಸುತ್ತಿದ್ದ ಐದು ಜನ ಬಡ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕೋರ್ಸಿಗೆ ಅಗತ್ಯವಿರುವ ಸಂಪೂರ್ಣ ಆರ್ಥಿಕ ನೆರವು ನೀಡಲು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಮುಂದಾಗಿದ್ದಾರೆ.
ವಿಜಯಪುರ ನಗರದಲ್ಲಿರುವ ಗೃಹ ಕಚೇರಿಯಲ್ಲಿ ತಿಕೋಟಾ ತಾಲ್ಲೂಕಿನ ಬಾಬಾನಗರದ ವಿಶಾಲ ರಾಯಗೊಂಡ ಕೋರೆಗಾಂವ, ಅರಕೇರಿಯ ಕರಣ ಪಂಡಿತ ಸಿಂಧೆ ಮತ್ತು ಯಶವಂತ ಮಾರುತಿ ಮೋಹಿತೆ, ಬಬಲೇಶ್ವರ ತಾಲ್ಲೂಕಿನ ಕಾರಜೋಳ ತಾಂಡಾದ ಅಜೀತ್ ಪರಶುರಾಮ ರಾಠೋಡ ಹಾಗೂ ಕಂಬಾಗಿಯ ರಾಜಶ್ರೀ ಮಲ್ಲಿಕಾರ್ಜುನ ಮಠ ಅವರಿಗೆ ಸಚಿವರು ಮೊದಲ ಕಂತಿನಲ್ಲಿ ಎಂ.ಬಿ.ಬಿ.ಎಸ್. ಕೋರ್ಸಿನ ಮೊದಲ ವರ್ಷದ ಬೋಧನೆ ಶುಲ್ಕ, ಹಾಸ್ಟೆಲ್ ಶುಲ್ಕ ಮತ್ತು ಊಟದ ಶುಲ್ಕಕ್ಕೆ ಅಗತ್ಯವಾಗಿರುವ ಹಣದ ಚೆಕ್ ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಎಂ.ಬಿ. ಪಾಟೀಲ, ಉತ್ತಮವಾಗಿ ವಿದ್ಯಾಭ್ಯಾಸ ಮಾಡಿ ಪೋಷಕರು, ಊರು, ಜಿಲ್ಲೆ ಮತ್ತು ರಾಜ್ಯಕ್ಕೆ ಹೆಸರು ತರಬೇಕು. ವೈದ್ಯರಾದ ನಂತರ ಉತ್ತಮ ಸೇವೆ ಸಲ್ಲಿಸಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳ ಪೋಷಕರು ಮಾತನಾಡಿ, ಮಕ್ಕಳ ಭವಿಷ್ಯ ಬಗ್ಗೆ ಚಿಂತೆ ಉಂಟಾಗಿತ್ತು. ನೀಟ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ನಮ್ಮ ಮಕ್ಕಳು ಎಂ.ಬಿ.ಬಿ.ಎಸ್. ಸೀಟು ಪಡೆದರೂ ಹಣವಿಲ್ಲದ ಕಾರಣ ಸಂಕಷ್ಟದಲ್ಲಿದ್ದೇವು. ಇಂಥ ಕಠಿಣ ಪರಿಸ್ಥಿತಿಯಲ್ಲಿ ಸಚಿವ ಎಂ.ಬಿ. ಪಾಟೀಲ ಅವರು ಆಪದ್ಬಾಂಧವರಾಗಿದ್ದಾರೆ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

