ಬೆಂಗಳೂರು: ಪಂಚಾಯತ್ ರಾಜ್ ಇಲಾಖೆಯಲ್ಲಿ ಎಲ್ಲ ಸವಲತ್ತು ಇದೆ, ಸಿಬ್ಬಂದಿಯೂ ಇದ್ದಾರೆ ಆದರೆ ಸರಿಯಾದ ರೀತಿಯಲ್ಲಿ ಮತ್ತು ಸರಿಯಾದ ಸಮಯದಲ್ಲಿ ಕೆಲಸಗಳು ಆಗುತ್ತಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಬೆಂಗಳೂರು ನಗರದಲ್ಲಿ ಇಂದು ಆಯೋಜಿಸಲಾಗಿದ್ದ ಪಂಚಾಯತ್ ರಾಜ್ ಅಧಿಕಾರಿಗಳ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಿರೀಕ್ಷಿತ ಮಟ್ಟದಲ್ಲಿ ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ, ಕೆಲಸವೂ ಆಗುತ್ತಿಲ್ಲ ಅಧಿಕಾರಿಗಳು ಹೇಗೆ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ಒಂದೂವರೆ ವರ್ಷದ ಅವಧಿಯಲ್ಲಿ ಗಮನಿಸಲಾಗಿದೆ ಪ್ರತಿ ತಿಂಗಳೂ ಪರಿಶೀಲನಾ ಸಭೆ ನಡೆಸಿ, ಸಲಹೆ ನೀಡಲಾಗುತ್ತಿದೆ. ಆದರೂ ಕಾರ್ಯವೈಖರಿಯಲ್ಲಿ ಸುಧಾರಣೆಯಾಗಿಲ್ಲ. ಹೀಗಾಗಿಯೇ ಈ ಸಮ್ಮೇಳನ ಆಯೋಜಿಸಲಾಗಿದೆ ಎಂದರು.
ನಾವು ನಮ್ಮ ಕರ್ತವ್ಯದ ಬಗ್ಗೆ ಆಸಕ್ತಿ ವಹಿಸದೇ ಇದ್ದರೆ ಜನರ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಿಲ್ಲ. ಪ್ರತಿದಿನ ಜನರೊಂದಿಗೆ ವ್ಯವಹಿರಿಸುವ ಇಲಾಖೆ ನಮ್ಮದು ಆದರೆ ನಮ್ಮ ಅಧಿಕಾರಿಗಳಿಗೆ ಕೇಳಿಸಿಕೊಳ್ಳುವ ಪ್ರವೃತ್ತಿಯೇ ಇಲ್ಲ ಎಂಬುದನ್ನು ಹಲವು ಬಾರಿ ಗಮನಿಸಿದ್ದೇನೆ. ಅಧಿಕಾರಿಗಳು ಆಳುವ ಮನಸ್ಥಿಯಿಂದ ಹೊರಗೆ ಬರಬೇಕು ಮತ್ತು ಆಲಿಸುವ ಪ್ರವೃತ್ತಿಯನ್ನು ರೂಢಿಸಿಕೊಳ್ಳಬೇಕು ಎಂದರು.
ಇದು ಯಾರೊ ಒಬ್ಬ ಸಚಿವ, ಕಾರ್ಯದರ್ಶಿ, ಹೆಚ್ಚುವರಿ ಕಾರ್ಯದರ್ಶಿಗೆ ಅನ್ವಯವಾಗುದಿಲ್ಲ. ಇಲಾಖೆಯ ಪ್ರತಿ ಸಿಬ್ಬಂದಿಯೂ ಇದನ್ನು ರೂಢಿಸಿಕೊಳ್ಳಬೇಕು ಪ್ರತಿಯೊಬ್ಬರೂ ಪರಿಣಾಮಕಾರಿಯಾಗಿ ಕೆಲಸ ಮಾಡಿದರೆ ಮಾತ್ರ ಜನರಿಗೆ ಉತ್ತಮ ಸೇವೆ ನೀಡಲು ಸಾಧ್ಯವಾಗುತ್ತದೆ. ಅದರಿಂದ ಇಲಾಖೆಗೂ ಒಳ್ಳೆಯದಾಗುತ್ತದೆ ಸರ್ಕಾರದ ಯೋಜನೆ ಮತ್ತು ಕಲ್ಯಾಣ ಕಾರ್ಯಕ್ರಮಗಳು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಬರುತ್ತವೆ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

