Breaking News

ಕಿತ್ತೂರು ವಿಜಯೋತ್ಸವದ 200ನೇ ವರ್ಷಾಚರಣೆ: ಮೆರವಣಿಗೆಗೆ ಅದ್ದೂರಿ ಚಾಲನೆ

ಚನ್ನಮ್ಮನ ಕಿತ್ತೂರು: ಕಿತ್ತೂರು ವಿಜಯೋತ್ಸವದ 200ನೇ ವರ್ಷಾಚರಣೆ ಅಂಗವಾಗಿ ಇಂದು ನಡೆದ ಜಾನಪದ ಕಲಾವಾಹಿನಿ ಮೆರವಣಿಗೆ, ಕ್ರಾಂತಿ ನೆಲದ ಹಿರಿಮೆ ಎತ್ತಿ ಹಿಡಿಯಿತು ರಾಜಬೀದಿಯಲ್ಲಿ ಎಲ್ಲಿ ನೋಡಿದರೂ ಜನವೋ ಜನ, ಎತ್ತ ನೋಡಿದರೂ ಸಂಭ್ರಮವೋ ಸಂಭ್ರಮ. ಕಲಾವಿದರು, ವಾದ್ಯಗಾರರು, ನೃತ್ಯಪಟುಗಳು, ಮಕ್ಕಳು, ಹಿರಿಯರು, ಮಹಿಳೆಯರೆಲ್ಲ ಸೇರಿ ನೂಪುರ ಲೋಕವನ್ನೇ ಸೃಷ್ಟಿಮಾಡಿದರು.
ರಾಜ್ಯದಾದ್ಯಂತ ಸಂಚರಿಸಿ ಬಂದ ವಿಜಯ ಜ್ಯೋತಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಸ್ವಾಗತಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಮೆರವಣಿಗೆಗೆ ಚಾಲನೆ ನೀಡಿದರು. ಕಿಕ್ಕಿರಿದು ಸೇರಿದ್ದ ಜನಸ್ತೋಮದಿಂದ ರಾಣಿ ಚನ್ನಮ್ಮನಿಗೆ ಜಯವಾಗಲಿ, ಸಂಗೊಳ್ಳಿ ರಾಯಣ್ಣನಿಗೆ ಜಯವಾಗಲಿ, ಅಮಟೂರು ಬಾಳಪ್ಪ, ಸರ್ದಾರ್‌ ಗುರುಸಿದ್ಧಪ್ಪನವರಿಗೆ ಜಯವಾಗಲಿ ಎಂದು ಘೋಷಣೆ ಕೇಳಿಬಂದಿತು, ಸಾವಿರಾರು ಧ್ವನಿಗಳು ಏಕಕಾಲಕ್ಕೆ ಕಿತ್ತೂರು ಕ್ರಾಂತಿಯನ್ನು ಹಾಡಿ ಹೊಗಳಿದವು.
ಅಂಗ್ಲೋ- ಕಿತ್ತೂರು ಯುದ್ಧದ ಸಂದರ್ಭದಲ್ಲಿ ಸೈನ್ಯವನ್ನು ಹುರಿದುಂಬಿಸಲು ರಾಣಿ ಚನ್ನಮ್ಮ ಕೂಗಿದ ಹರಹರ ಮಹಾದೇವ ಘರ್ಜನೆಯನ್ನು ನಿರಂತರ ಮೊಳಗಿಸಿದರು.
ಆಕರ್ಷಕ ಕಲಾ ತಂಡಗಳು, ಕಲಾವಾಹಿನಿಗಳು, ಅಲಂಕೃತ ವಾಹನಗಳು ಒಂದರ ಹಿಂದೆ ಒಂದು ಸಾಗಿದವು. ನೂರಡಿ ವಿಸ್ತಾರದ ರಾಜಬೀದಿಯಲ್ಲಿ ಜನ ನದಿಯಂತೆ ಹರಿದು ಬಂದರು. ರಸ್ತೆಯ ಇಕ್ಕೆಲಗಳಲ್ಲಿ, ಕಟ್ಟಡಗಳ ಮೇಲೆ ನಿಂತು ಪುಷ್ಪವೃಷ್ಟಿ ಮಾಡಿ, ಬಾವುಟ ಹಾರಿಸಿ ಕಳೆ ತಂದರು ವರ್ಣರಂಜಿತ ವೈಭೋಗ ಕಣ್ತುಂಬಿಕೊಂಡರು.
ಪೌರಾಣಿಕ ವೇಷಧಾರಿಗಳ ಜತೆ ಸೆಲ್ಫಿ, ಫೋಟೊ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ನೆತ್ತಿ ಮೇಲೆ ಬಂದ ಸೂರ್ಯನ ಪ್ರಖರತೆಯನ್ನೂ ಲೆಕ್ಕಿಸದೇ ಕಲಾವಿದರು ಬರಿಗಾಲಲ್ಲಿ ಹೆಜ್ಜೆ ಹಾಕಿದರು.
ಹೃನ್ಮನ ಸೆಳೆಯುವಂಥ ವೇಷಭೂಷಣ, ಸಿಳ್ಳೆ ಚಪ್ಪಾಳೆ ಕೇಕೆಗಳ ಮಧ್ಯೆ ಹೆಜ್ಜೆ ಹಾಕಿದ ಕಲಾತಂಡಗಳು, ದಢಂದಢಕ್‌ ದಢಂದಢಕ್ ದೇಸಿವಾದ್ಯಗಳ ಸದ್ದು, ಗೆಜ್ಜೆನಾದ, ಹಲಗೆಮೇಳ, ಡೊಳ್ಳು- ಢಮರುಗ, ಜಾಂಝ್‌ಪಥಕ್‌, ಕೀಲುಕುದುರೆ, ಕೋಳಿನೃತ್ಯ, ಗೊರವರ ಕುಣಿತ, ಪಟಾಕುಣಿತ, ಕಥಕ್ಕಳಿ, ದೊಡ್ಡಸಂಬಾಳ ಮೇಳ, ನಗಾರಿ, ಚಂಡೆಮದ್ದಳೆ, ಪೂಜಾ ಕುಣಿತ, ನಂದಿಧ್ವಜ, ಗೆಜ್ಜಲಿಗೆ ಮೇಳ, ಯಕ್ಷಗಾನ, ವೀರಗಾಸೆ, ಗೊಂಬೆ ಕುಣಿತ, ಬ್ಯಾಂಡ್‌ನವರು, ತಾಸೆದವರು, ಹುಲಿವೇಷದವರು, ಭಜನೆಯವರು. ಒಂದೇ ಎರಡೇ ಎರಡು ಕಿ.ಮೀ ದೂರದವರೆಗೆ ನಡೆದ ಅದ್ಧೂರಿ ಮೆರವಣಿಗೆ ಕಿತ್ತೂರು ಕರ್ನಾಟಕದ ಅಭಿಮಾನಕ್ಕೆ ಕನ್ನಡಿ ಹಿಡಿಯಿತು. ನೂರಕ್ಕೂ ಅಧಿಕ ತಂಡಗಳು ಸಮಾವೇಶಗೊಂಡವು.
1824ರ ಅಕ್ಟೋಬರ್‌ 23ರಂದು ಕಿತ್ತೂರು ಸೇನೆ ಬ್ರಿಟಿಷ್‌ ಸೈನ್ಯದ ವಿರುದ್ಧ ವಿಜಯ ಸಾಧಿಸಿತು ಆ ವಿಜಯಕ್ಕೆ 200 ವಸಂತಗಳು ತುಂಬಿವೆ ಈ ಹಿಂದೆಂದಿಗಿಂತಲೂ ಈ ಬಾರಿಯ ಉತ್ಸವ ವೈಭವೋಪೇತವಾಗಿ ನಡೆಯಿತು.

Share News

About BigTv News

Check Also

ಸಿಲಿಂಡರ್ ಸ್ಫೋಟಗೊಂಡು 20ಕ್ಕೂ ಹೆಚ್ಚು ಕಾರ್ಮಿಕರ ಶೆಡ್‌ಗಳು ಭಸ್ಮ!

ಕಲಬುರಗಿ ಜಿಲ್ಲೆಯ ಹೊನ್ನಕಿರಣಗಿ ಗ್ರಾಮದ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದಲ್ಲಿರುವ ಗುಲ್ಬರ್ಗಾ ಸಿಮೆಂಟ್ ಕಾರ್ಖಾನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಭಾರೀ ಅಗ್ನಿ …

Leave a Reply

Your email address will not be published. Required fields are marked *