ರಾಮನಗರ: ಹಾಡಹಗಲೇ ಸಿನಿಮೀಯ ಶೈಲಿಯಲ್ಲಿ ಬಾಲಕಿಗೆ ಚಾಕುವಿನಿಂದ ಇರಿದು ಅಪಹರಣ ಮಾಡಿದ ಘಟನೆ ರೇಷ್ಮೆನಗರಿ ರಾಮನಗರದ ಕಾಲೇಜುವೊಂದರ ಬಳಿ ಇಂದು ಬೆಳಗ್ಗೆ ನಡೆದಿತ್ತು. ಸ್ವಲ್ಪ ಸಮಯದ ಬಳಿಕ ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವುದು ಬೆಳಕಿಗೆ ಬಂದಿದೆ. ಕಿಡ್ನಾಪ್ ಆಗಿದ್ದ ಬಾಲಕಿ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಎಂದು ತಿಳಿದಬಂದಿದೆ. ಕಾರಿನಲ್ಲಿ ಅಪಹರಣ ಮಾಡುವ ಮೊದಲು ಆಕೆಯ ಕೈ ಹಾಗೂ ಭುಜದ ಭಾಗಕ್ಕೆ ಚಾಕುವಿನಿಂದ ಹಲ್ಲೆ ಮಾಡಿರುವ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ರಾಮನಗರ ಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಸ್ಥಳೀಯರಿಂದಲೂ ಮಾಹಿತಿ ಕಲೆಹಾಕುತ್ತಿದ್ದಾರೆ. ಮಾಹಿತಿ ಪ್ರಕಾರ, ಕನಕಪುರದ ದಾಳಿಂಬ ಗ್ರಾಮದ ವಿದ್ಯಾರ್ಥಿನಿ ಎಂದಿನಂತೆ ಇಂದು ಬೆಳಗ್ಗೆ ತನ್ನ ಸಹಪಾಠಿಗಳೊಂದಿಗೆ ಕಾಲೇಜಿಗೆ ಹೋಗುತ್ತಿದ್ದಳು. ಬಾಲಕಿ ಕಾಲೇಜು ಪ್ರವೇಶದ್ವಾರಕ್ಕೆ ಬರುತ್ತಿದ್ದಂತೆ ಕಾರಲ್ಲಿ ಬಂದ ಗುಂಪಿನ ಪೈಕಿ ಓರ್ವನು ಬಾಲಕಿಗೆ ಚಾಕುವಿನಿಂದ ಇರಿದಿದ್ದಾನೆ. ನೋವಿನಿಂದ ಕುಸಿದ ಬಾಲಕಿಯನ್ನು ಕಾರಿನೊಳಕ್ಕೆ ಎಳೆದು ಪರಾರಿಯಾಗಿದ್ದಾರೆ. ಘಟನೆ ಗಮನಿಸಿದ ಸ್ಥಳದಲ್ಲಿದ್ದವರು ಕಾರಿಗೆ ಕಲ್ಲು ತೂರಿ ತಡೆಯಲು ಯತ್ನಿಸಿದ್ದಾರೆ. ಆದರೂ, ಕಾರು ನಿಲ್ಲಿಸದೆ ಬಾಲಕಿಯನ್ನು ಅಪಹರಿಸಿ ಸ್ಥಳದಿಂದ ಕಾಲ್ಕಿತ್ತಿದ್ದರು. ಬಾಲಕಿ ಕಿಡ್ನಾಪ್ ಆಗಿದ್ದ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ರವಾನಿಸಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





