ವಯನಾಡ್: 17ನೇ ವಯಸ್ಸಿನಿಂದಲೇ ರಾಜಕೀಯ ಪ್ರಚಾರಗಳಲ್ಲಿ ಭಾಗವಹಿಸುತ್ತಾ ಬಂದಿದ್ದು, ರಾಜಕೀಯದಲ್ಲಿ ನನಗೆ 35 ವರ್ಷಗಳ ಅನುಭವವಿದೆ ಎಂದು ವಯನಾಡ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ ಅವರು ಪ್ರತಿಸ್ಪರ್ಧಿ ಬಿಜೆಪಿಯ ನವ್ಯಾ ಹರಿದಾಸ್ ಅವರಿಗೆ ಪರೋಕ್ಷವಾಗಿ ಕುಟುಕಿದ್ದಾರೆ.
ಜನರನ್ನು ಪ್ರತಿನಿಧಿಸುವ ವಿಚಾರದಲ್ಲಿ ಪ್ರಿಯಾಂಕಾ ಗಾಂಧಿಗಿಂತ ಹೆಚ್ಚಿನ ಅನುಭವ ನನಗಿದೆ ಎಂದು ನವ್ಯಾ ಹರಿದಾಸ್ ಮಂಗಳವಾರ ಹೇಳಿದ್ದರು.
ನಾಮಪತ್ರ ಸಲ್ಲಿಸುವ ಮುನ್ನ ಕಲ್ಪೇಟಾದಲ್ಲಿ ನಡೆದ ರೋಡ್ ಶೋನಲ್ಲಿ ಭಾಗವಹಿಸಿ ಮಾತನಾಡಿದ ಪ್ರಿಯಾಂಕಾ, 1989ರಲ್ಲಿ ಮೊದಲ ಬಾರಿಗೆ ನನ್ನ ತಂದೆ ರಾಜೀವ್ ಗಾಂಧಿ ಅವರ ಪರ ನಾನು ಮತಯಾಚಿಸಿದ್ದೇನೆ ಆಗ ನನಗೆ 17 ವರ್ಷ ವಯಸ್ಸಾಗಿತ್ತು. 35 ವರ್ಷಗಳಿಂದ ರಾಜಕೀಯ ಪ್ರಚಾರಗಳಲ್ಲಿ ಭಾಗವಹಿಸುತಿದ್ದು, ನನ್ನ ತಾಯಿ ಸೋನಿಯಾ ಗಾಂಧಿ, ಸಹೋದರ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನಾಯಕರ ಪರ ಮತಯಾಚಿಸಿದ್ದೇನೆ ಎಂದು ಹೇಳಿದ್ದಾರೆ.
ಭೂಕುಸಿತ ಸಂಭವಿಸಿದ ಸಂದರ್ಭದಲ್ಲಿ ವಯನಾಡಿನ ಜನರು ತೋರಿಸಿದ ಧೈರ್ಯ ಕಂಡು ಅಚ್ಚರಿಯಾಗಿತ್ತು. ಅಂತಹ ಜನರನ್ನು ಪ್ರತಿನಿಧಿಸುವುದು ಗೌರವದ ಸಂಗತಿಯಾಗಿದೆ ಎಂದಿದ್ದಾರೆ.
ಪ್ರಿಯಾಂಕಾ ಗಾಂಧಿ ವಿರುದ್ಧ ಆಡಳಿತಾರೂಢ ಎಲ್‌ಡಿಎಫ್‌ನಿಂದ ಸತ್ಯನ್ ಮೊಕೇರಿ ಮತ್ತು ಬಿಜೆಪಿಯಿಂದ ನವ್ಯಾ ಹರಿದಾಸ್ ಕಣದಲ್ಲಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

