Breaking News

ಮಾದಕವಸ್ತು ಮುಕ್ತ ಜಿಲ್ಲೆಗಾಗಿ ನವೆಂಬರದಿಂದ ವಿಶೇಷ ಜಾಗೃತಿ ಕಾರ್ಯಕ್ರಮಗಳ ಆಯೋಜನೆ: ಜಿಲ್ಲಾಧಿಕಾರಿ ದಿವ್ಯ ಪ್ರಭು

ಧಾರವಾಡ : ಬರುವ ನವೆಂಬರ ಹಾಗೂ ಡಿಸೆಂಬರ ತಿಂಗಳಲ್ಲಿ ವಿಶೇಷ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜಿಲ್ಲೆಯನ್ನು ಮಾದಕವಸ್ತು ಮುಕ್ತ ಜಿಲ್ಲೆ ಆಗಿ ಮಾಡಲು ಕ್ರಮವಹಿಸಲಾಗುವುದು. ಮಾದಕವಸ್ತು ಮುಕ್ತ ಜಿಲ್ಲೆಗಾಗಿ ಶಾಲಾ ಕಾಲೇಜುಗಳಲ್ಲಿ ಒಂದು ತಿಂಗಳ ಪರಿಯಂತರ ಜಾಗೃತಿ ಅಭಿಯಾನ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.

ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಾದಕವಸ್ತು ನಿಯಂತ್ರಣ ಹಾಗೂ ನಿರ್ಮೂಲನೆ ಕುರಿತು ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಮಾಸಿಕ ಪ್ರಗತಿ ಪರಿಶೀಲನೆ ಸಭೆ ಜರುಗಿಸಿ, ಮಾತನಾಡಿದರು.
ಮಾದಕವಸ್ತುಗಳ ಬಗ್ಗೆ ಸಾರ್ವಜನಿಕರಲ್ಲಿ ವ್ಯಾಪಕವಾಗಿ ಪ್ರಚಾರ ಮಾಡಿ, ತಿಳುವಳಿಕೆ ಮೂಡಿಸಬೇಕು. ಮಾದಕವಸ್ತುಗಳ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರವು ಅಗತ್ಯವಾಗಿದೆ ಎಂದು ಅವರು ಹೇಳಿದರು.

ಜಿಲ್ಲೆಯನ್ನು ಮಾದಕವಸ್ತು ಮುಕ್ತ ಜಿಲ್ಲೆ ಆಗಿಸುವಲ್ಲಿ ಸಂಬಂಧಿಸಿದ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯಕ್ರಮ ರೂಪಿಸಬೇಕು. ಬರುವ ನವೆಂಬರ ಮತ್ತು ಡಿಸೆಂಬರ ತಿಂಗಳಲ್ಲಿ ಡ್ರಗ್ಸ್ ಕುರಿತು ಶಾಲಾ ಕಾಲೇಜುಗಳಲ್ಲಿ ವಿಶೇಷ ಉಪನ್ಯಾಸ, ಕಿರುನಾಟಕ, ಏಕಪಾತ್ರಾಭಿನಯದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಅಭಿಯಾನ ಮಾಡಬೇಕು. ಈ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಹಾಗೂ ಪೊಲೀಸ್ ಆಯುಕ್ತಾಲಯ, ಶಿಕ್ಷಣ ಸಂಸ್ಥೆ, ಶಿಕ್ಷಣ, ಆರೋಗ್ಯ ಇಲಾಖೆಗಳ ಜೊತೆ ಚರ್ಚಿಸಿ, ಯೋಜನೆ ರೂಪಿಸಿಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಪ್ರತಿ ಕಾಲೇಜುಗಳಿಗೆ ತಮ್ಮ ವಿದ್ಯಾರ್ಥಿಗಳಿಗೆ, ಪಾಲಕರಿಗೆ ಮತ್ತು ಸಿಬ್ಬಂದಿಗಳಿಗೆ ಡ್ರಗ್ಸ್ ಕುರಿತು ಜಾಗೃತಿ ಮೂಡಿಸುವ ಜವಾಬ್ದಾರಿ ನೀಡಲಾಗಿದೆ. ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಘಟಿಸುವ ಶಿಕ್ಷಣ ಸಂಸ್ಥೆ, ಕಾಲೇಜುಗಳಿಗೆ ಪ್ರಶಂಸನಾ ಪತ್ರ ನೀಡಿ, ಅಭಿನಂದಿಸಲಾಗುವುದು ಎಂದು ಅವರು ಹೇಳಿದರು.
ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಗೋಪಾಲ ಬ್ಯಾಕೋಡ ಅವರು ಮಾತನಾಡಿ, ಪ್ರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಅಂಚೆ ಕಚೇರಿಗೆ ಭೇಟಿ ನೀಡಿ, ಪಾರ್ಸಲ್‍ಗಳ ಬಗ್ಗೆ, ಸಂಶಯಾಸ್ಪದ ಕೋರಿಯರ್, ಪೋಸ್ಟ್‍ಗಳ ಬಗ್ಗೆ ಮತ್ತು ಅತಿ ಹೆಚ್ಚು ಪೊಸ್ಟ್, ಪಾರ್ಸಲ್ ಬರುವ ವ್ಯಕ್ತಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ, ಪರಿಶೀಲಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಧಾರವಾಡ ಗ್ರಾಮೀಣ ಜಿಲ್ಲೆಯಲ್ಲಿ ಮಾದಕವಸ್ತು, ಕಳ್ಳಬಟ್ಟಿ ಬಗ್ಗೆ ಎಚ್ಚರಿಕೆ ವಹಿಸಿ, ಅಂತಹ ಪ್ರಕರಣ ತಿಳಿದು ಬಂದಲ್ಲಿ ತಕ್ಷಣ ಕ್ರಮಕೈಗೊಳ್ಳಲಾಗುತ್ತಿದೆ. ಅವಳಿನಗರ ಹೊರತು ಪಡಿಸಿ ಜಿಲ್ಲೆಯ ಎಲ್ಲ ನಗರ ಹಾಗೂ ದೊಡ್ಡ ಗ್ರಾಮಗಳಲ್ಲಿ, ಎಲ್ಲ ಹಂತದ ಕಾಲೇಜುಗಳಲ್ಲಿ ಡ್ರಗ್ಸ್ ಕುರಿತು ವಿವಿಧ ರೀತಿ ತಿಳುವಳಿಕೆ ಕಾರ್ಯಕ್ರಮಗಳನ್ನು ಜಿಲ್ಲಾಡಳಿತದ ಸಮನ್ವಯದಲ್ಲಿ ಮುಂದಿನ ದಿನಗಳಲ್ಲಿ ಆಯೋಜಿಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಡಿವೈಎಸ್‍ಪಿ ಶಿವಾನಂದ ಕಟಗಿ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಎಸ್.ಕೆಳದಿಮಠ, ಎಸ್.ಡಿ.ಎಮ್. ಕಾಲೇಜಿನ ಎಸ್.ಎಂ.ಓ ಡಾ. ರೋಶನ್ ಆರ್., ಧಾರವಾಡ ಉಪವಿಭಾಗದ ಡಿವಾಯ್‍ಎಸ್‍ಇ ದೀಪಕ ಎಸ್, ಎಸಿಪಿ ಡಾ. ಶಿವರಾಜ.ಕೆ.ಕೊಕಟಭಾವಿ, ಡಿಎಲ್‍ಓ ಡಾ. ಕಳಸೂರಮಠ ಎಸ್.ಬಿ., ಡಿಎಮ್‍ಎಚ್‍ಪಿ ಡಾ. ರಾಘವೇಂದ್ರ ಪಾಟೀಲ, ಸಹಾಯಕ ಪ್ರಾಧ್ಯಾಪಕ ಡಾ. ಪ್ರಮೋದ ಎಸ್.ಸಿ, ಧಾರವಾಡ ಐಐಟಿಯ ಅಣ್ಣಪ್ಪ ಜಿ.ಕೆ, ಎನ್.ಡಬ್ಲ್ಯು.ಆರ್.ಟಿ.ಸಿಯ ಡಿಸಿ ಎಸ್.ಬಿ. ಚನ್ನಪ್ಪಗೌಡರ, ಕಾರ್ಮಿಕ ಇಲಾಖೆ ರಾಜೇಂದ್ರ ಆರ್.ಎಮ್, ಕೆ.ಎಲ್.ಇ ತಾಂತ್ರಿಕ ವಿದ್ಯಾಲಯದ ಡೀನ್ ಡಾ. ಪಂಡಿತ ಆರಾಧ್ಯ ಬಿ.ಟಿ., ಡಾ. ಸಂಜೀವ ಜೆ.ಕೆ, ನೀಲಮ್ಮಾ ಅಶೋಕ ಕೊಟುರ, ಪರಿಮಳಾ.ವಿ.ಎಚ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ವಿವಿಧ ಶಾಲಾ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

Share News

About Shaikh BigTv

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *