ಬೀದರ್: ಸಹಕಾರಿ ಬ್ಯಾಂಕುಗಳು ಉದ್ಯೋಗ ಸೃಷ್ಟಿಸಲು ಹೆಚ್ಚಿನ ಒತ್ತು ಕೊಡಬೇಕು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.
ನಗರದ ಸಿಂದೋಲ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ದಿ ಗಾಂಧಿ ಗಂಜ್ ಕೋ ಆಪರೇಟಿವ್ ಬ್ಯಾಂಕಿನ ಸುವರ್ಣ ಮಹೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕಾರು ಖರೀದಿ, ನಿವೇಶನ ಮತ್ತು ಮನೆ ನಿರ್ಮಾಣಕ್ಕೆ, ಲಗ್ನಕ್ಕೆ ಸಹಕಾರಿ ಬ್ಯಾಂಕುಗಳು ಸಾಲ ಕೊಡುತ್ತವೆ ಆದರೆ, ಕೈಗಾರಿಕೆಗಳ ಸ್ಥಾಪನೆಗೆ ಸಾಲ ಕೊಡುವುದಿಲ್ಲ. ಎಲ್ಲಿಯವರೆಗೆ ಉದ್ಯೋಗ ಸೃಷ್ಟಿಗೆ ಪೂರಕವಾದ ಕಿರು ಕೈಗಾರಿಕೆಗಳ ಸ್ಥಾಪನೆಗೆ ಸಾಲ ಕೊಡುವುದಿಲ್ಲವೋ ನಮ್ಮ ಉದ್ದೇಶ ಯಶಸ್ವಿಯಾಗುವುದಿಲ್ಲ ಸಮಾಜ ಸೇವೆ ಮಾಡಿದಂತೆಯೂ ಆಗುವುದಿಲ್ಲ ಎಂದರು.
ಹೆಚ್ಚಿನ ಉದ್ಯೋಗಗಗಳು ಸೃಷ್ಟಿಯಾದರೆ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ. ಉದ್ಯೋಗ ಸೃಷ್ಟಿಗೆ ಬ್ಯಾಂಕುಗಳು ಮುಂದಾಗುವ ಅಗತ್ಯವಿದೆ. ಪ್ರತಿ ಸಭೆಯಲ್ಲೂ 10 ಉದ್ಯೋಗ ಸೃಷ್ಟಿಸುವವರಿಗೆ ಸಾಲ ಕೊಡುತ್ತೇವೆ ಎಂದು ನಿರ್ಧಾರ ಕೈಗೊಳ್ಳಬೇಕು. ದುಡಿಯುವ ಕೈಗಳಿಗೆ ಉದ್ಯೋಗ ಕೊಟ್ಟರೆ ಅದರಿಂದ ಸಿಗುವ ಸಮಾಧಾನ ಯಾವುದರಿಂದಲೂ ಸಿಗುವುದಿಲ್ಲ. ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು ಉದ್ಯೋಗ ಸೃಷ್ಟಿಸಿದರೆ ಬ್ಯಾಂಕಿನ 50 ವರ್ಷಾಚರಣೆಗೆ ಅರ್ಥ ಬರುತ್ತದೆ ಎಂದು ಹೇಳಿದರು.
ತರಕಾರಿ, ಹಣ್ಣು ಮಾರಾಟ ಮಾಡುವವರು, ಗ್ಯಾರೇಜ್ ನಡೆಸುವವರು ಇಂದಿಗೂ ಖಾಸಗಿಯಲ್ಲಿ ಸಾಲ ತೆಗೆದುಕೊಳ್ಳುತ್ತಾರೆ. ಶೇ 25ರ ಬಡ್ಡಿಯಲ್ಲಿ ಸಾಲ ಪಡೆದು ವ್ಯವಹಾರ ಮಾಡುತ್ತಾರೆ ಇಂತಹ ಗ್ರಾಹಕರು ಎಲ್ಲ ಕಡೆಗಳಲ್ಲಿ ಇದ್ದಾರೆ. ಅಂತಹವರನ್ನು ಗುರುತಿಸಿ ನಮ್ಮ ಸೇವೆ ತಲುಪಿಸಿದರೆ ಅದಕ್ಕಿಂತ ದೊಡ್ಡ ಕೆಲಸ ಬೇರೊಂದು ಇಲ್ಲ ಎಂದು ತಿಳಿಸಿದರು.
ಸಾಂಪ್ರದಾಯಿಕ ಮನಃಸ್ಥಿತಿಯಿಂದ ಸಹಕಾರಿ ಬ್ಯಾಂಕುಗಳು ಹೊರಬರಬೇಕು ಪ್ರತಿಯೊಂದು ಸಾಲಕ್ಕೆ ಸೆಕ್ಯುರಿಟಿ ಕೇಳಬಾರದು. ಹೊಸ ಉದ್ಯಮ ಆರಂಭಿಸಲು ಸಾಲ ಕೊಡಲ್ಲ ಎಂದರೆ ನಿಮ್ಮ ಬೆಳವಣಿಗೆ ಆಗುವುದಿಲ್ಲ ಶ್ರೀಮಂತರಿಗೆ ಅನುಕೂಲ ಮಾಡಿಕೊಡಲು ನಮ್ಮ ಬ್ಯಾಂಕುಗಳು ಇರುವುದಲ್ಲ. ಬಡವರು ಸ್ವಾಭಿಮಾನಿಗಳಾಗಿ ಬದುಕಲು ಅನುಕೂಲ ಮಾಡಿಕೊಡಬೇಕು ಶೋಷಿತ ವರ್ಗದ ದುಡಿಯುವವರನ್ನು ಗುರುತಿಸಿ ಸಾಲ ಕೊಡಬೇಕು ಎಂದರು.
ಸಹಕಾರ ಕ್ಷೇತ್ರದ ಬಗ್ಗೆ ನಮ್ಮ ಹಿರಿಯರಿಗೆ ಇದ್ದ ಆಸಕ್ತಿ, ಕಾಳಜಿ ಇಂದಿನ ಯುವಕರಲ್ಲಿ ಕಾಣಿಸುತ್ತಿಲ್ಲ. ಹೀಗಾಗಿಯೇ ಸಹಕಾರಿ ಕ್ಷೇತ್ರದವರು ವಿಫಲರಾಗುತ್ತಿದ್ದಾರೆ. ರಾಜಕೀಯ, ಚುನಾವಣೆಗೆ ಇರುವ ಉತ್ಸಾಹ ಅದನ್ನು ಬೆಳೆಸುವುದರ ಬಗ್ಗೆ ಇಲ್ಲ. ಸಹಕಾರಿ ಬ್ಯಾಂಕುಗಳು ರಾಜಕೀಯ ಮೆಟ್ಟಿಲು ಅಲ್ಲ, ಅದು ಸೇವಾ ಕ್ಷೇತ್ರದ ಮೆಟ್ಟಿಲು ಎಂಬ ಭಾವನೆ ಬರಬೇಕಿದೆ. ಯುವಕರು ಈ ಕ್ಷೇತ್ರಕ್ಕೆ ಬರಬೇಕು. ಇದರಲ್ಲಿ ಇರುವ ಅಧಿಕಾರ ಯಾವ ಮಂತ್ರಿ, ಎಂಎಲ್‌ಎಗೂ ಇಲ್ಲ ಎಂದು ಹೇಳಿದರು.
ಇದುವರೆಗೆ ಎಲ್ಲ ಸಹಕಾರಿ ಬ್ಯಾಂಕುಗಳು ಆರ್‌ಬಿಐ ಅಡಿಯಲ್ಲಿ ಕೆಲಸ ನಿರ್ವಹಿಸಬೇಕಿತ್ತು. ಈಗ ಹಾಗಿಲ್ಲ ಇದಕ್ಕಾಗಿಯೇ ಪ್ರತ್ಯೇಕ ಸಂಸ್ಥೆಯನ್ನು ಹುಟ್ಟು ಹಾಕಲಾಗಿದೆ. ಈ ಸಂಸ್ಥೆ ಎಲ್ಲ ರೀತಿಯಿಂದಲೂ ಸಹಕಾರಿ ಬ್ಯಾಂಕುಗಳಿಗೆ ಮಾರ್ಗದರ್ಶನ ಮಾಡುತ್ತದೆ. ಏಪ್ರಿಲ್‌ನಿಂದ ಇದು ಅಧಿಕೃತವಾಗಿ ಕೆಲಸ ಆರಂಭಿಸಲಿದೆ ಸಹಕಾರಿಗಳನ್ನು ಯಾರು ಕೇಳುವವರು ಇಲ್ಲವೆಂಬ ಚಿಂತೆ ಇದರಿಂದ ದೂರವಾಗಲಿದೆ ಎಂದು ವಿವರಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

