ಮಂಡ್ಯ : ಗ್ಯಾರಂಟಿ ಯೋಜನೆಗಳು ಸರ್ಕಾರಕ್ಕೆ ಹೊರೆಯಾಗಿಯೂ ಇಲ್ಲ ಅವುಗಳನ್ನು ನಿಲ್ಲಿಸುವ ಪ್ರಶ್ನೆಯೂ ಸರ್ಕಾರದ ಮುಂದಿಲ್ಲ ಎಂದು ಸಚಿವ ಎನ್.ಚಲುವರಾಯಸ್ವಾಮಿ ಸ್ಪಷ್ಟಪಡಿಸಿದರು.
ನಗರದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಶಕ್ತಿ ಯೋಜನೆಯನ್ನು ನಿಲ್ಲಿಸುವುದಾಗಿ ಎಲ್ಲಿಯೂ ಹೇಳಿಲ್ಲ. ಕೆಲ ಮಹಿಳೆಯರು ಟಿಕೆಟ್ ಬೇಡ ಎನ್ನುತ್ತಿದ್ದಾರೆ ಆ ಬಗ್ಗೆ ಚರ್ಚೆ ನಡೆಸುವುದಾಗಷ್ಟೇ ಹೇಳಿದ್ದಾರೆ. ಸಿಎಂ ಕೂಡ ಯೋಜನೆ ನಿಲ್ಲಿಸುವುದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ ಹಾಗಾಗಿ ರಾಜಕೀಯವಾಗಿ ಈ ವಿಷಯವನ್ನು ಚರ್ಚಿಸುವುದು ಬೇಡ ಎಂದರು.
ಗ್ಯಾರಂಟಿ ಯೋಜನೆಗಳ ಜಾರಿ ನಡುವೆಯೂ ಅಭಿವೃದ್ಧಿ ಕೆಲಸಗಳಿಗೆ ತೊಂದರೆಯಾಗಿಲ್ಲ. ಯಾವುದೇ ವಿಧವಾದ ಮಾಸಾಶನ ನೀಡುವುದನ್ನೂ ನಿಲ್ಲಿಸಿಲ್ಲ ಎಲ್ಲಾ ಇಲಾಖೆಗಳ ಕಾರ್ಯಕ್ರಮಗಳು, ಯೋಜನೆಗಳಿಗೆ ಹಣ ನೀಡಲಾಗುತ್ತಿದೆ. ಕಾಂಗ್ರೆಸ್ ಸರ್ಕಾರದ ಒಳ್ಳೆಯ ಕೆಲಸವನ್ನು ಸಹಿಸದೆ ವಿಪಕ್ಷಗಳು ಟೀಕೆ ಮಾಡುತ್ತಿವೆ ಎಂದು ದೂಷಿಸಿದರು. ನ್ಯಾಯಬದ್ಧವಾಗಿ ಕೇಂದ್ರ ಸರ್ಕಾರ ನೀಡಬೇಕಿದ್ದ ತೆರಿಗೆ ಹಣವನ್ನು ನೀಡದಿದ್ದಾಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ಹಣ ಬಿಡುಗಡೆ ಮಾಡಿಸಿ ಇತಿಹಾಸ ಸೃಷ್ಟಿಸಿದ್ದೇವೆ. ಬಿಜೆಪಿಯವರು ಸಂಸದರಾಗಿದ್ದುಕೊಂಡು ತೆರಿಗೆ, ಬರಪರಿಹಾರ ಹಣವನ್ನು ಕೇಂದ್ರದಿಂದ ಕೊಡಿಸಲಾಗಲಿಲ್ಲ. ರಾಜ್ಯಸರ್ಕಾರ ಒಳ್ಳೆಯ ಕೆಲಸಗಳನ್ನು ಮಾಡುವಾಗ ಅದನ್ನು ಬೆಂಬಲಿಸಬೇಕೇ ಹೊರತು ಟೀಕಿಸಬಾರದು ಎಂದು ಕಿವಿಮಾತು ಹೇಳಿದರು.
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಷಡ್ಯಂತ್ರ ಮಾಡುವುದೇನಿದೆ. ಗೆಲುವಿಗೆ ಬೇಕಾದ ತಂತ್ರಗಳನ್ನು ರೂಪಿಸುವುದು ಸಹಜ. ನಿಖಿಲ್ ಕುಮಾರಸ್ವಾಮಿ ಎರಡು ಚುನಾವಣೆಯಲ್ಲಿ ಸೋತಿದ್ದಾರೆ. ಸಹಜವಾಗಿ ನೋವಿನಿಂದ ಮಾತನಾಡಿರಬಹುದು. ಸಿ.ಪಿ. ಯೋಗೇಶ್ವರ್ ಕೂಡ ಸೋತಿಲ್ಲವೇ. ಚನ್ನಪಟ್ಟಣದ ಕೆರೆಗಳನ್ನೆಲ್ಲಾ ತುಂಬಿಸಿ ಭಗೀರಥ ಎನಿಸಿಕೊಂಡಿದ್ದವರು ಚುನಾವಣೆಯಲ್ಲಿ ಸೋತರು. ಅದೂ ಕೂಡ ಷಡ್ಯಂತ್ರವಲ್ಲವೇ. ಅವರಿಗೆ ನೋವಾಗುವುದಿಲ್ಲವೇ ಎಂದು ಸುದ್ದಿಗಾರರ ಪ್ರಶ್ನೆಗೆ ಮರು ಪ್ರಶ್ನೆ ಹಾಕಿದರು. ವಕ್ಫ್ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ರೈತರು ಆತಂಕಕಕ್ಕೆ ಒಳಗಾಗುವುದು ಬೇಡ. ಆರ್‌ಟಿಸಿಯಲ್ಲಿ ವಕ್ಫ್ ಆಸ್ತಿ ಎಂದು ಬಂದಾಕ್ಷಣ ಅದು ವಕ್ಫ್ ವಶವಾಗುವುದಿಲ್ಲ. ಅದನ್ನು ಕಾರ್ಯರೂಪಕ್ಕೆ ತರದಂತೆ ಜಿಲ್ಲಾಡಳಿತಕ್ಕೆ ತಿಳಿಸುತ್ತೇನೆ. ಯಾರಿಗೂ ತೊಂದರೆಯಾಗದ ರೀತಿಯಲ್ಲಿ ಕ್ರಮ ವಹಿಸುವ ಭರವಸೆ ನೀಡಿದರು. ಶಾಸಕ ಪಿ.ರವಿಕುಮಾರ್, ವಿಧಾನ ಪರಿಷತ್ ಶಾಸಕ ದಿನೇಶ್ ಗೂಳಿಗೌಡ, ನಗರಸಭೆ ಅಧ್ಯಕ್ಷ ನಾಗೇಶ್, ಮಾಜಿ ಅಧ್ಯಕ್ಷ ಎಚ್.ಎಸ್.ಮಂಜು, ಜಿಲ್ಲಾ ಕಾಂಗ್ರೆಸ್ ಮಹಿಳಾಧ್ಯಕ್ಷೆ ಅಂಜನಾ ಇದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

