Breaking News

ಮರಗಳು ಇಲ್ಲೆ ಉಳಿದವು, ಮರ ನೀಡಿದ ಹಣ್ಣುಗಳು ಪಟ್ಟಣ ಸೇರಿದವು

ಅನಾದಿ ಕಾಲದಿಂದಲೂ ಇದೇ ಆಗಿರುವುದು, ಈಗಲೂ ಅದೇ ಆಗುತ್ತಿರುವುದೂ ಕೂಡ.  ಆದರೆ ಈಗ ಆಗುತ್ತಿರುವ ಬದಲಾವಣೆ ಭಯ ಹುಟ್ಟಿಸುವಂತಾದ್ದು.  ಆ ಭೂಮಿ, ಆ ಪರಿಸರ, ಆ ವ್ಯವಸ್ಥೆಯೊಂದಿಗೆ ಬೆಸಗೊಂಡ ಹೃದಯಗಳ ಭಾವನೆಗಳು ಕ್ರಮೆಣ ಕಡಿಮೆಯಾಗುತ್ತಿದೆ.  ಇದರ ಪರಿಣಾಮವೇ *
ಹಣ್ಣುಗಳನ್ನು ನೀಡಿದ ಮರಗಳು ಇಲ್ಲೇ ಉಳಿದವು, ಹಣ್ಣುಗಳು ಮಾತ್ರ ಪಟ್ಟಣ ಸೇರಿದವು.

ಹಿಂದೆ ಹಳ್ಳಿಗಳು ಅನ್ನದ ಕಣಜ ಎಂದೇ ಹೆಸರಾಗಿದ್ದವು.  ಆದರೆ ಅದೇ ಈ ಹಳ್ಳಿಗಳು ಕೇವಲ ವೃದ್ದಾಶ್ರಮಗಳಾಗಿ ಮಾರ್ಪಟ್ಟಿವೆ.  ಯಾವ ಹಳ್ಳಿಗಳಲ್ಲು ಯುವಕರು ಕಾಣುವುದೇ ವಿರಳಾತಿವಿರಳ.  ಹಳ್ಳಿಗಳಲ್ಲಿ ವಯೋವೃದ್ದರು ಅವರ ಮನೆಯ ಜಗುಲಿಯ ಮೇಲೋ, ಕಂಬಕ್ಕೆ ಬೆನ್ನಾನಿಸಿಕೊಂಡು ಮುಗಿಲ ಕಡೆ ಮುಖ ಮಾಡಿ ಅದ್ಯಾವುದೋ ಯೋಚನೆ ಮಾಡುವುದು, ಮನೆಯ ಒಡತಿಯ ಕಣ್ಣಾಲೆಗಳು ದೂರದಲ್ಲಿ ಬರುವ ವಾಹನವನ್ನೇ ದೃಷ್ಟಿಸಿ ನೋಡುತ್ತಾ ನನ್ನ ಮಗ ಬಂದಾನು, ಮೊಮ್ಮಕ್ಕಳು ಬಂದಾವೆಂದು ತವಕದಲಿ, ಮಕ್ಕಳಿಗೆ ತುತ್ತ್ತುಣಿಸುವ ಹಂಬಲತೆ, ಮೊಮ್ಮೊಕ್ಕಳೊಂದಿಗೆ ಮಗುವಾಗಿ ಆಡುವ ಬಯಕೆಗಳು ಹೃದಯದಲ್ಲಿ ಒಸರುತ್ತಿದ್ದರೆ, ಆ ವೃದ್ದರ ಕಣ್ಣುಗಳು ಕಣ್ಣೀರ  ಕಣ್ತುಂಬಿ ನೋಡುವ ಸಂಗತಿಗಳು ಸಾಮಾನ್ಯವಾಗಿಯೇ ಕಾಣುತ್ತವೆ. ಹಳ್ಳಿಗಳಿಂದು ವೃದ್ದಾಶ್ರಮವಲ್ಲದೆ ಬೇರೇನೂ ಅಲ್ಲ.

ಅತಿಯಾದ ನಗರೀಕರಣ, ಜಾಗತೀಕರಣಗಳು ಯುವ ಜನತೆಯನ್ನು ಹಳ್ಳಿಗಳನ್ನು ತೊರೆಯುವಂತೆ ಮಾಡಿವೆ.  ರೈತಾಪಿತನ ಇಂದು ನಷ್ಠದ ವ್ಯವಸ್ಥೆ. ರೈತರು ಬೆಳೆದ ಬೆಳೆಗಳಿಗೆ ವ್ಯಾಪಾರಸ್ಥರು, ಮಧ್ಯವರ್ತಿಗಳು ಬೆಲೆ ನಿಗದಿ ಮಾಡುತ್ತಾರೆ, ಆದರೆ ಉದ್ಯಮವೆಂದು ಪರಿಗಣಿಸಲ್ಪಟ್ಟ ಮಾಲುಗಳ ಬೆಲೆಯನ್ನು ತಯಾರು ಮಾಡಿದ ಉದ್ಯಮಿ ನಿರ್ಧರಿಸುತ್ತಾನೆ.  ವ್ಯವಸಾಯ ಉದ್ಯಮವೆಂದು ತೀರ್ಮಾನಿಸದೆ ಇರುವುದೂ ಒಂದು ಕಾರಣ. ಹೀಗೆ ಇದರ ಹಿಂದೆ ಹಲವಾರು ಕಾರಣಗಳಿರಬಹುದು, ಅದು ಆರ್ಥಿಕ, ಸಾಮಾಜಿಕ ಕಾರಣಗಳಿರುತ್ತವೆ.   ಆದರೆ ಈ ವ್ಯವಸ್ಥೆಗಳಿಂದ ನೋವುಣ್ಣುವವರು ನಮ್ಮ ನಿಮ್ಮ ಹೆತ್ತಂತಹ ತಂದೆ ತಾಯಿಯವರೇ ಆಗಿರುತ್ತಾರೆ.   ಆದರೆ ಇಲ್ಲಿ ಒಂದು ಸೂಕ್ಷ್ಮವಾದ ಸಣ್ಣ ಎಳೆಯೂ ಒಂದಿದೆ, ಅದೇನೆಂದರೆ ಹಿರಿಯರೂ ಸಹ *ನಾವು ಕಷ್ಟ ಬಿದ್ದಿದ್ದೇವೆ, ನಮ್ಮ ಮಕ್ಕಳು ಕಷ್ಠ ಬೀಳುವುದು ಬೇಡ ಎಂಬ ಮಾನಸಿಕತೆಯೇ ಮುಂದೊಂದು ದಿನ ಹಿರಿಯರು ಕಣ್ಣೀರು ಹಾಕಿಸುವಂತಹ ಸಂದಿಘ್ದತೆಗೆ ತರುತ್ತದೆ ಎಂದರೂ ತಪ್ಪಾಗುವುದಿಲ್ಲ.*

ಎಳೆಯವರಿಗೆ ಊರು, ಕೇರಿ, ಮಣ್ಣು, ಓಣಿ, ನೆಲ, ಜಲ, ಹಳ್ಳ, ಕೊಳ್ಳ, ಗುಡ್ಡ, ಜನ, ಜಾನಪದ  ಪಾರಂಪರಿಕತೆಯ ಎಳೆಗಳನ್ನು ಪರಿಚಯಮಾಡಿಸಿಕೊಡದೇ ಇರುವುದೇ ಈ ಹಳ್ಳಿಗಳು ವೃದ್ದಾಶ್ರಮವಾಗಲು ಜಾರಣವಾಗುತ್ತಿದೆ.  ಎಲ್ಲಕ್ಕೂ ಹಣವೇ ಮುಖ್ಯ ಎಂದು ಹಿರಿಯರು ಮಕ್ಕಳು ಹಾಗೂ ಕಿರಿಯರ ಮುಂದೆ ನಡವಳಿಕೆ ತೋರ್ಪಡಿಸಿಕೊಂಡಾಗ ಕಿರಿಯವರಿಗೆ *ಈ ಜಗತ್ತಿನಲ್ಲಿ ಹಣದ ಮುಂದೆ ಎಲ್ಲವೂ ನಶ್ವರ ಎಂದೆನಿಸುತ್ತಾ, ಹಣವೊಂದಿದ್ದರೆ ಎಲ್ಲವನ್ನೂ ಗಳಿಸುತ್ತೇವೆ ಎಂಬ ಭ್ರಮೆಯಿಂದ ಆವರಿಸಿಕೊಂಡು, ಹಿರಿಯರನ್ನು ಕಡೆಗಣನೆ ಮಾಡಿ ಹಣದ ಹಿಂದೆ ಓಡುತ್ತಾ ತಾನು ಹುಟ್ಟಿದ ಮನೆ, ಬೆಳೆದ ಓಣಿ, ಆಡಿದ ಕೇರಿ, ಹತ್ತಿದ ಗುಡ್ಡ, ಈಜಿದ ಹಳ್ಳ. ಪೂಜಿಸಿದ ಗ್ರಾಮ್ಯ ದೇವರು, ಎತ್ತಿ ಆಡಿಸಿದ ಬಂಧುಗಳನ್ನೂ ಮರೆಯುವಂತಾಗಿ ಹಿರಿಯರನ್ನು ಕಡೆಗಣಿಸುತ್ತಾರೆ ಎಂಬುದು ನನ್ನ ಅಭಿಪ್ರಾಯ.   ಜೊತೆಗೆ ಹೇಳಿ ಕೇಳಿ ಇದು ಬಹಳ ಫಾಸ್ಟ್ ಯುಗ.  ಎಲ್ಲವೂ ಫಾಸ್ಟ್ ಇರಬೇಕು.   ನಗರೀಕರಣ, ಇಂಟರ್ ನೆಟ್, ಸೋಸಿಯಲ್ ಮೀಡಿಯಾ, ಗೆಳೆಯ – ಗೆಳತಿಯರು ಇವೆಲ್ಲವೂ ಕಾರಣವಾಗುತ್ತವೆ.   ನಗರೀಕರಣದ ಭಾಗವಾದ ಮಾಲ್ ಸಂಸ್ಕೃತಿ, ಕೈಗೆಟಕುವ ಎಲ್ಲಾ ಸೌಲಭ್ಯಗಳು ಯುವ ಜನತೆಯನ್ನು ಆಕರ್ಷಿಸುತ್ತಿವೆ.  ಆದರೆ ಹಳ್ಳಿಗಳಲ್ಲಿ ಶುದ್ದ ಪರಿಸರ, ಶುದ್ದ ಗಾಳಿ, ಶುದ್ದ ಮನಸ್ಸುಗಳನ್ನು ಹೊರತುಪಡಿಸಿದರೆ ಮತ್ತೇನೂ ಸಿಗುವುದಿಲ್ಲ.  ಹಾಗಾಗಿಯೇ ಯುವ ಜನತೆಗೆ ಶುದ್ದತೆಗಿಂತ ಫಾಸ್ಟ್ ಲೈಫ್ ಇಷ್ಟವಾಗುತ್ತದೆ. ಒಂದು ವರುಷದಲ್ಲಿ ಒಮ್ಮೆ ಬಂದು ಅಪ್ಪ, ಅಮ್ಮ ಎನ್ನುವ ಮಕ್ಕಳು, ಹಾಯ್ ತಾತ, ಹಾಯ್ ಅಜ್ಜಿ ಎಂದು ಹೇಳಿ ಮತ್ತೆ ವಾಟ್ಸಪ್ ನಲ್ಲೋ, ಸ್ನ್ಯಾಪ್ ಚಾಟ್ ನಲ್ಲೋ ಬ್ಯುಸಿಯಾಗುವ ಮೊಮ್ಮಕ್ಕಳು, ಇವುಗಳ ನಡುವೆ ಮುಗ್ದ ಪ್ರೀತಿಗಾಗಿ ಚಡಪಡಿಸುವ ಹಿರಿಯ ವೃದ್ದ ಜೀವಗಳು ಇವೆಲ್ಲವೂ ಇಂದು ಸಾಮಾನ್ಯವಾಗಿಯೇ ಇವೆ.

ಎಲ್ಲದಕ್ಕಿಂತ ಬಹಳ ಆತಂಕದ ಸಂಗತಿ ಎಂದರೆ ಧವಸ ಧಾನ್ಯಗಳ ಕಣಜವೆಂದೇ ಕರೆಯಲಾಗುವ ಹಳ್ಳಿಗಳಲ್ಲಿ ಧವಸಗಳನ್ನು ಬೆಳೆಯುವವರೇ ಕಡಿಮೆ ಎನಿಸುತ್ತಿದೆ.  ಧವಸ ಧಾನ್ಯಗಳ ಬೆಳೆಯುವಿಕೆ ಕ್ಷೀಣಿಸುತ್ತಿದೆ.  ಕೃಷಿಯು ಒಂದು ರೀತಿ ದುಬಾರಿ ಎನಿಸುವುದರಿಂದ ಹಳ್ಳಿಗಳು ಧಾನ್ಯಗಳ ಕಣಜವಾಗುವುದಕ್ಕಿಂತ ಕಡಿಯುವ ಕಡಜವಾಗಿ ಮಾರ್ಪಡಿಸುತ್ತಿದೆ.  ಕೃಷಿಯ ಸಹವಾಸ ಬೇಡವೆಂದು ಯುವ ಜನತೆಯು ಇಂದು ನಗರೀಕರಣದ ಸೆಳೆತಕ್ಕೊಳಪಟ್ಟು ನಗರ ಸೇರಿಕೊಳ್ಳುತ್ತಿದ್ದಾರೆ.  ಹಾಗಾಗಿ ಹಿರಿಯರು ತಮ್ಮ ಹೃದಯದೊಂದಿಗೆ ಬೆಸೆಗೊಂಡ ಹಳ್ಳಿಯನ್ನು ಬಿಡದೆ ಅಲ್ಲಿಯೇ ಇರುವುದೂ, ಮಕ್ಕಳು ನಗರ ಸೇರಿರುವುದು ಸತ್ಯವೇ ಇದೆ.  ಹಾಗಾಗಿ ವೃದ್ದರಾದವರು ಹಳ್ಳಿಗಳಲ್ಲಿಯೇ ಬೀಡುಬಿಟ್ಟರೆ ಯುವ ಜನತೆ ನಗರಕ್ಕೆ ಸೆಳೆತಗೊಂಡಿದರ ಪರಿಣಾಮ ಇಂದು ಹಳ್ಳಿಗಳು *ವೃದ್ದಾಶ್ರಮ* ಗಳಾಗಿ ಮಾರ್ಪಟ್ಟಿವೆ.

Share News

About Shaikh BigTv

Check Also

ಬೆಂಗಳೂರಲ್ಲಿ ನಕಲಿ ಡೇಟಿಂಗ್ ಬಲೆ, 20 ಲಕ್ಷ ರೂ. ಮೌಲ್ಯದ ಚಿನ್ನ ಲೂಟಿ

ಬೆಂಗಳೂರು: ಚಂದ್ರಾ ಲೇಔಟ್‌ನಲ್ಲಿ ಡೇಟಿಂಗ್ ಆಯಪ್ ಮೂಲಕ ಪರಿಚಯವಾದ ವ್ಯಕ್ತಿಯನ್ನು ಮನೆಗೆ ಕರೆಸಿಕೊಂಡ ಯುವಕನಿಗೆ ಚಾಕು ತೋರಿಸಿ ಬೆದರಿಸಿ, 226 …

Leave a Reply

Your email address will not be published. Required fields are marked *