ಬಳ್ಳಾರಿ: ಸಂಡೂರು ತಾಲ್ಲೂಕಿನ ನಾರಿಹಳ್ಳ ಜಲಾಶಯದ ಬಳಿಯಿರುವ 104 ಎಕರೆ ದಟ್ಟ ಅರಣ್ಯ ಪ್ರದೇಶದಲ್ಲಿ ಜೆಎಸ್‌ಡಬ್ಲ್ಯು ಎನರ್ಜಿ ಲಿಮಿಟೆಡ್ ಸಂಸ್ಥೆಯು 300 ಮೆಗಾವ್ಯಾಟ್ ಸಾಮರ್ಥ್ಯದ ಜಲವಿದ್ಯುತ್ ಯೋಜನೆ ಅನುಷ್ಠಾನಗೊಳಿಸಲು ಉದ್ದೇಶಿಸಿದೆ.
ಇದರಿಂದ ಒಂದೆಡೆ ಅರಣ್ಯ ನಾಶದ ಆತಂಕವಿದ್ದರೆ, ಇನ್ನೊಂದೆಡೆ ಸರ್ಕಾರಿ ಸಂಸ್ಥೆಗೆ ಸಿಗಬೇಕಿದ್ದ ಯೋಜನೆಯನ್ನು ಹಿಂದಿನ ಸರ್ಕಾರವು ಮುಂದೆ ನಿಂತು ಖಾಸಗಿ ಸಂಸ್ಥೆಗೆ ನೀಡಿದ್ದು ಬಹಿರಂಗವಾಗಿದೆ.
ಸಂಡೂರಿನ ತಾರಾನಗರದ ಬಳಿ ಇರುವ ನಾರಿಹಳ್ಳ ಜಲಾಶಯಕ್ಕೆ ಹೊಂದಿಕೊಂಡಿರುವ 412.41 ಎಕರೆ ಪ್ರದೇಶದಲ್ಲಿ ₹1590 ಕೋಟಿ ವೆಚ್ಚದಲ್ಲಿ ಜಲ ವಿದ್ಯುತ್ ಯೋಜನೆ ಅನುಷ್ಠಾನಗೊಳಿಸಲು ಜೆಎಸ್‌ಡಬ್ಲ್ಯು ಬಯಸಿದೆ. ಇದಕ್ಕೆ 24.46 ಎಕರೆ ಸರ್ಕಾರಿ ಜಾಗ ಮತ್ತು 104 ಎಕರೆ ದಟ್ಟ ಅರಣ್ಯ ಪ್ರದೇಶ ಬಳಕೆ ಆಗಲಿದೆ. ಈ ಪೈಕಿ 72.89 ಎಕರೆ ಪ್ರದೇಶ ಮುಳುಗಡೆ ಆಗಲಿದೆ ಎಂಬುದು ಯೋಜನೆಯ ಪ್ರಸ್ತಾವದಿಂದ ಗೊತ್ತಾಗಿದೆ.
ಈ ಯೋಜನೆಗೆ 2022ರ ಅಕ್ಟೋಬರ್ 22ರಂದು ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ‘ರಾಜ್ಯ ಉನ್ನತ ಮಟ್ಟಣದ ಅನುಮೋದನಾ ಸಮಿತಿ (ಎಸ್‌ಎಚ್‌ಎಲ್‌ಸಿಸಿ) ಸಮ್ಮತಿಯನ್ನೂ ನೀಡಿದೆ. ಸದ್ಯ, ಅರಣ್ಯ ಮತ್ತು ಪರಿಸರ ಅನುಮತಿ ಪಡೆಯಲು ಕೇಂದ್ರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಪರಿಣಾಮ ಮೌಲ್ಯಮಾಪನ(ಐಎ) ವಿಭಾಗದಲ್ಲಿ ಪ್ರಕ್ರಿಯೆ ನಡೆದಿವೆ.
ಯೋಜನೆಯ ಪರಿಸರ ಆಘಾತ ಅಧ್ಯಯನ (ಇಐಎ)ನಡೆಸುವುದಕ್ಕೂ ಮುನ್ನ ಅಗತ್ಯವಿರುವ ವಿಸ್ತೃತ ಯೋಜನಾ ವಿವರಣೆ (ಟಿಒಆರ್)ಗೆ ಅನುಮತಿ ನೀಡುವ ಸಂಬಂಧ 2023ರ ಏಪ್ರಿಲ್ 26ರಂದು ನಡೆದ ಕೇಂದ್ರ ಅರಣ್ಯ ಸಚಿವಾಲಯದ ಪರಿಣಾಮ ಅಧ್ಯಯನ (ಐಎ) ವಿಭಾಗದ ಸಭೆಯಲ್ಲಿ ನದಿ ಕಣಿವೆ ಮತ್ತು ಜಲವಿದ್ಯುತ್ ಯೋಜನೆಗಳ ತಜ್ಞರ ಮೌಲ್ಯಮಾಪನ ಸಮಿತಿ (ಇಎಸಿ)ಯು ಯೋಜನೆ ಕುರಿತು ಆಕ್ಷೇಪಗಳನ್ನು ಎತ್ತಿದೆ.
ಯೋಜನೆಗೆ ನಾರಿಹಳ್ಳ ಜಲಾಶಯವನ್ನು ಯಾವ ರೀತಿ ಬಳಸಲಾಗುವುದು ಎಂಬುದನ್ನು ಸಂಸ್ಥೆ ತಿಳಿಸಿಲ್ಲ. ಅಲ್ಲದೆ, ಈ ಯೋಜನೆಯು ಈಗಿರುವ ನೀರಿನ ಬೇಡಿಕೆಗೆ ಅಡ್ಡಿ ಆಗುವುದೇ ಎಂಬುದು ಉಲ್ಲೇಖಿಸಿಲ್ಲ ಉದ್ದೇಶಿತ ಯೋಜನಾ ಜಾಗ ಅತೀ ಸೂಕ್ಷ್ಮ ಪ್ರದೇಶ. ಯೋಜನೆಗೆ ಪರ್ಯಾಯ ಜಾಗ ಬಳಸುವ ಪ್ರಸ್ತಾವವನ್ನು ಮರು ಪರಿಶೀಲಿಸಲು ಸಮಿತಿ ಸೂಚಿಸುತ್ತಿದೆ. ಅಲ್ಲದೆ, ಪರಿಸರದ ಮತ್ತು ಜಲಾಶಯದ ಸ್ಥಿತಿಗತಿ ಅದ್ಯಯನಕ್ಕೆ ಸಮಿತಿಯ ಸದಸ್ಯರು ಸ್ಥಳಪರಿಶೀಲನೆ ಮಾಡಲು ಸಮಿತಿ ನಿರ್ಧರಿಸಿದೆ ಎಂದು ತಿಳಿಸಿತ್ತು.
ಇದೆಲ್ಲವನ್ನು ಗಮನಿಸಿದ ಕೇಂದ್ರ ಅರಣ್ಯ ಇಲಾಖೆ, ಕೆಲವು ಷರತ್ತುಗಳನ್ನು ವಿಧಿಸಿ ಟಿಒಆರ್‌ಗೆ ಅನುಮೋದನೆ ನೀಡಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

