Breaking News

ವಕ್ಫ್ ಮಸೂದೆ ಜಂಟಿ ಸಂಸದೀಯ ಸಮಿತಿ ಅಧಿಕಾರವಧಿ ವಿಸ್ತರಿಸಲು ಸರ್ವಾನುಮತದ ನಿರ್ಧಾರ

ನವದೆಹಲಿ: ವಕ್ಫ್ (ತಿದ್ದುಪಡಿ) ಮಸೂದೆ ಪರಿಶೀಲಿಸುತ್ತಿರುವ ಜಂಟಿ ಸಂಸದೀಯ ಸಮಿತಿಯು ತನ್ನ ಅಧಿಕಾರಾವಧಿಯನ್ನು ಮುಂದಿನ ಬಜೆಟ್ ಅಧಿವೇಶನದ ಕೊನೆಯ ದಿನದವರೆಗೆ ವಿಸ್ತರಿಸಲು ಬುಧವಾರ ಸರ್ವಾನುಮತದಿಂದ ನಿರ್ಧರಿಸಿದೆ.
ಇದಕ್ಕೂ ಮೊದಲು ಸಮಿತಿಯ ಕರಡು ವರದಿಯನ್ನು ಅಂಗೀಕರಿಸಲು ಸಿದ್ಧವಾಗಿದ್ದ ಜಂಟಿ ಸಂಸದೀಯ ಸಮಿತಿ ಅಧ್ಯಕ್ಷ ಜಗದಾಂಬಿಕ ಪಾಲ್ ಅವರ ನಿಲುವಿನಿಂದಾಗಿ, ಸಭೆಯು ವಿಪಕ್ಷಗಳ ಸದಸ್ಯರ ಆಕ್ರೋಶದ ಪ್ರತಿಭಟನೆಗೂ ಸಾಕ್ಷಿಯಾಯಿತು.
ವಿರೋಧ ಪಕ್ಷದ ಸದಸ್ಯರು ಸಭಾತ್ಯಾಗ ಮಾಡಿ, ಪಾಲ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರಿಂದ ಸಭೆಯಲ್ಲಿ ಕೆಲ ಸಮಯ ಗದ್ದಲದ ವಾತಾವರಣ ಉಂಟಾಯಿತು. ಪಾಲ್ ಮತ್ತು ಸಮಿತಿಯ ಬಿಜೆಪಿ ಸದಸ್ಯರು ವಿಪಕ್ಷ ಸದಸ್ಯರನ್ನು ಮನವೊಲಿಸಿದ ನಂತರ ವಾತಾವರಣ ತಿಳಿಯಾಯಿತು.
ವಕ್ಫ್ ಮತ್ತು ರಾಜ್ಯ ಸರ್ಕಾರಗಳ ನಡುವೆ ವಿವಾದಗಳಿರುವ ಆರು ರಾಜ್ಯಗಳು ಸೇರಿದಂತೆ ಇತರ ಕೆಲವು ಮಧ್ಯಸ್ಥಗಾರರ ಅಹವಾಲು ಆಲಿಸಬೇಕಿರುವುದರಿಂದ ಸಮಿತಿಯು ತನ್ನ ಅಭಿಪ್ರಾಯದಲ್ಲಿ ಸರ್ವಾನುಮತವನ್ನು ಹೊಂದಿದೆ. ವರದಿ ಸಲ್ಲಿಸಬೇಕಿರುವ ಗಡುವನ್ನು ವಿಸ್ತರಿಸುವ ಅವಶ್ಯಕತೆಯಿದೆ ಎಂಬುದು ನಮ್ಮ ಭಾವನೆ ಎಂದು ಬಿಜೆಪಿ ಸಂಸದ ಪಾಲ್‌ ಸುದ್ದಿಗಾರರಿಗೆ ತಿಳಿಸಿದರು.
2025ರ ಬಜೆಟ್ ಅಧಿವೇಶನದ ಕೊನೆಯ ದಿನದವರೆಗೆ, ಸದನಕ್ಕೆ ತನ್ನ ವರದಿ ಸಲ್ಲಿಸುವ ಗಡುವು ವಿಸ್ತರಿಸಲು ಸಮಿತಿಯು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರಿಗೆ ಮನವಿ ಮಾಡಲಿದೆ ಎಂದು ಬಿಜೆಪಿ ಸಂಸದ ಮತ್ತು ಸಮಿತಿಯ ಸದಸ್ಯ ಅಪರಾಜಿತಾ ಸಾರಂಗಿ ಕೂಡ ಹೇಳಿದ್ದಾರೆ.
ಈ ನಿಟ್ಟಿನಲ್ಲಿ ಪಾಲ್ ಅವರು ಲೋಕಸಭೆಯಲ್ಲಿ ನಿರ್ಣಯವನ್ನು ಮಂಡಿಸುವ ಸಾಧ್ಯತೆಯಿದೆ. ಅಲ್ಲದೆ, ಸಮಿತಿಯು ವಿವಿಧ ಮಧ್ಯಸ್ಥಗಾರರನ್ನು ಭೇಟಿ ಮಾಡಲು ಕೆಲವು ರಾಜ್ಯಗಳಿಗೆ ಭೇಟಿ ನೀಡುವ ನಿರೀಕ್ಷೆಯಿದೆ.

Share News

About BigTv News

Check Also

ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಅಪಹರಿಸಿ ವ್ಯಕ್ತಿ ಹತ್ಯೆ

ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಉಲ್ಬಣಗೊಂಡಿದ್ದು ಮೈತೇಯಿ ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ಶಂಕಿತ ಕುಕಿ ಸಮುದಾಯದ ಬಂಡುಕೋರರು ಅಪಹರಿಸಿ ಗುಂಡಿಕ್ಕಿ ಹತ್ಯೆ …

Leave a Reply

Your email address will not be published. Required fields are marked *