Breaking News

ಮಳೆಹಾನಿಯಿಂದ ರೈತರಿಗೆ ಈ ವರ್ಷ 297 ಕೋಟಿ ರೂ. ಪರಿಹಾರ: ಸಚಿವ ಕೃಷ್ಣ ಬೈರೇಗೌಡ

ಬೆಳಗಾವಿ: ಕಳೆದ ವರ್ಷ ರಾಜ್ಯ ಬರಕ್ಕೆ ತುತ್ತಾಗಿದ್ದರೆ, ಈ ವರ್ಷ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ಹಲವು ಜಿಲ್ಲೆಗಳಲ್ಲಿ ಬೆಳೆಹಾನಿಯಾಗಿದೆ. ಬರ ಪರಿಹಾರವಾಗಿ ರಾಜ್ಯ ಸರ್ಕಾರ ಕಳೆದ ವರ್ಷ ರೂ.4200 ಕೋಟಿ ಹಣವನ್ನು ರೈತರಿಗೆ ಪರಿಹಾರದ ರೂಪದಲ್ಲಿ ನೀಡಿದರೆ, ಮಳೆಹಾನಿಗೆ ಈ ವರ್ಷ ರೂ.297 ಕೋಟಿ ಹಣವನ್ನು ಪರಿಹಾರವಾಗಿ ರೈತರಿಗೆ ನೀಡಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಸದನಕ್ಕೆ ಮಾಹಿತಿ ನೀಡಿದರು.
ಶುಕ್ರವಾರ ಶೂನ್ಯವೇಳೆ ಚರ್ಚೆಯ ಸಂದರ್ಭದಲ್ಲಿ ರಾಜ್ಯದಲ್ಲಿ ಉಂಟಾದ ಮಳೆಹಾನಿ ಹಾಗೂ ಸರ್ಕಾರ ತೆಗೆದುಕೊಂಡ ಕ್ರಮಗಳ ಬಗ್ಗೆ ಸದನಕ್ಕೆ ಉತ್ತರ ನೀಡಿದ ಅವರು, ಕಳೆದ ವರ್ಷದ ಬರ ಗಾಲದಲ್ಲಿ ರಾಜ್ಯ ಸರ್ಕಾರ 45 ಲಕ್ಷ ರೈತರಿಗೆ ರೂ.4200 ಕೋಟಿ ಹಣ ಪರಿಹಾರ ನೀಡಿದೆ. ಈ ವರ್ಷ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಈ ವರ್ಷ ಪೂರ್ವ ಮುಂಗಾರಿನಲ್ಲಿ ವಾಡಿಕೆ ಮಳೆ 115 ಮಿ.ಮೀ. ಆದರೆ, ವಾಸ್ತವದಲ್ಲಿ 151 ಮಿ.ಮೀ ಮಳೆಯಾಗಿದೆ. ಮುಂಗಾರಿನಲ್ಲಿ ವಾಡಿಕೆ 852 ಮಿ.ಮೀ. ಆದರೆ, 928 ಮಿ.ಮೀ ಮಳೆಯಾಗಿದೆ. ಹಿಂಗಾರಿನಲ್ಲಿ ವಾಡಿಕೆ ಮಳೆ 173 ಮಿ.ಮೀ. ವಾಸ್ತವವಾಗಿ 213 ಮಿ.ಮೀ ಮಳೆಯಾಗಿದೆ. ಎಲ್ಲಾ ಸೇರಿ ಒಟ್ಟಾರೆ ವಾಡಿಕೆಗಿಂತ ಶೇ.20 ರಷ್ಟು ಹೆಚ್ಚು ಮಳೆಯಾಗಿದೆ. ಎಲ್ಲಾ ಕಡೆ ಒಂದೇ ರೀತಿ ಮಳೆಯಾಗಿಲ್ಲ. ಕೆಲ ಜಿಲ್ಲೆಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯೂ ಆಗಿದೆ ಎಂದು ತಿಳಿಸಿದರು.
ಪ್ರಸ್ತುತ ಮುಂಗಾರು ಅವಧಿಯಲ್ಲಿ 1,59,718 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಹಾನಿಯಾಗಿತ್ತು. ಆಯಾ ಬೆಳೆಗೆ ಅನುಗುಣವಾಗಿ ಒಟ್ಟು ರೂ.94.94 ಕೋಟಿ ಪರಿಹಾರ ವಿತರಿಸಲಾಗಿದೆ. ಹಿಂಗಾರು ಹಂಗಾಮಿನಲ್ಲಿ 1,45,254 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಹಾನಿಯಾಗಿದೆ. ಇದಕ್ಕೆ ಸಂಬಂಧಿಸಿದಂತೆ ರೂ.112.17 ಕೋಟಿ ಹಣವನ್ನು ರೈತರಿಗೆ ಪರಿಹಾರವಾಗಿ ಮಂಜೂರು ಮಾಡಲಾಗಿದೆ. ಕೆಲವು ಭಾಗದಲ್ಲಿ ರೈತರಿಗೆ ಪರಿಹಾರ ಹಣ ಖಾತೆಗೆ ಜಮಾ ಆಗಿದೆ. ಕೆಲವು ಭಾಗಗಳಲ್ಲಿ ಆಗುತ್ತಿದೆ. ಮುಂದಿನ ಒಂದೆರಡು ವಾರದಲ್ಲಿ ಎಲ್ಲಾ ರೈತರ ಖಾತೆಗಳಿಗೂ ಪರಿಹಾರ ಹಣ ಸಂದಾಯವಾಗಲಿದೆ. ಆದರೆ, ಕಳೆದ ವರ್ಷ ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿ ಕೇಂದ್ರದಿಂದ ಬರ ಪರಿಹಾರ ಹಣ ಪಡೆದಿತ್ತು. ಆದರೆ, ಈ ವರ್ಷದ ಎನ್‌ಡಿಆರ್‌ಎಫ್‌ ಹರಿಹಾರದ ಹಣ ಇನ್ನೂ ಸಂದಾಯವಾಗಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.
ನಮ್ಮ ರಾಜ್ಯದಲ್ಲಿ 10 ಹವಾಮಾನ ವಲಯಗಳಿವೆ (ಆಗ್ರೋ ಕ್ಲೈಮ್ಯಾಟಿಕ್‌ ಝೋನ್). ಇಲ್ಲಿ 450 ಮಿ.ಮೀ ರಿಂದ 4,000 ಮಿ.ಮೀ ವರೆಗೆ ವಾಡಿಕೆ ಮಳೆಯಾಗುವ ವೈವಿಧ್ಯತೆಯ ಪ್ರದೇಶಗಳು ಕರ್ನಾಟಕದಲ್ಲಿದೆ. ದೇಶದ ಯಾವ ರಾಜ್ಯದಲ್ಲೂ ಈ ವೈವಿಧ್ಯತೆ ಇಲ್ಲ. ಇದರಿಂದ ರಾಜ್ಯದಲ್ಲಿ ಕೆಲ ಪ್ರಾಣಹಾನಿಯೂ ಸಂಬಂವಿಸಿದೆ. ಕೆಲವರು ಹೊಳೆ ಉಕ್ಕಿಹರಿಯುವ ಸಂದರ್ಭದಲ್ಲಿ ನೀರಿನಲ್ಲಿ ಇಳಿದು ಕೊಚ್ಚಿಹೋಗಿದ್ದಾರೆ. ಕೆರೆ ತುಂಬಿದೆ ಎಂದು ಗೊತ್ತಿದ್ದರೂ ಈಜಲು ಹೋಗಿ ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ. ಸಿಡಿಲು ಬಡಿತದಿಂದ ಮೃತಪಟ್ಟವರೂ ಸೇರಿ ಈ ವರ್ಷ ಒಟ್ಟಾರೆ 133 ಜನ ಪ್ರಾಣ ಕಳೆದುಕೊಂಡಿದ್ದಾರೆ. ಸರ್ಕಾರದ ಕಡೆಯಿಂದ ಇಂತಹ ಘಟನೆಗಳಿಗೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ. ಅಲ್ಲದೆ, ಈ ಎಲ್ಲಾ ಮೃತರ ಕುಟುಂಬಗಳಿಗೆ ಈಗಾಗಲೇ ತಲಾ ರೂ.5 ಲಕ್ಷ ಪರಿಹಾರ ನೀಡಲಾಗಿದೆ. ಇದಕ್ಕೆಂದು ರೂ. 6.64 ಕೋಟಿ ವ್ಯಯಿಸಲಾಗಿದೆ ಎಂದರು.
ಹಿಂದಿನ ವರ್ಷಕ್ಕೆ ಹೋಲಿಸಿದರೆ ಜಾನುವಾರು ಪ್ರಾಣಹಾನಿ ಕಡಿಮೆಯಾಗಿದೆ. 714 ಸಣ್ಣ-ದೊಡ್ಡ ಜಾನುವಾರುಗಳು ಪ್ರಾಣ ಕಳೆದುಕೊಂಡಿವೆ. ಇದಕ್ಕೆಂದು ರೂ. 1.20 ಕೋಟಿ ಪರಿಹಾರ ನೀಡಲಾಗಿದೆ. ಇದಲ್ಲದೆ, 20,893 ಮನೆಗಳು ಸಣ್ಣಪುಟ್ಟ ಅಥವಾ ಭಾಗಶಃ ಹಾನಿಯಾಗಿವೆ. 3,200 ಮನೆಗಳು ಪೂರ್ತಿ ಹಾನಿಯಾಗಿವೆ. ಮನೆಗಳ ಪರಿಹಾರಕ್ಕಾಗಿ ರೂ. 82.20 ಕೋಟಿ ಹಣ ಪಾವತಿ ಮಾಡಿದ್ದೇವೆ. ಇವೆಲ್ಲವೂ ಸೇರಿ ಈ ವರ್ಷ ಮಳೆಹಾನಿಗೆ ಸಂಬಂಧಿಸಿದಂತೆ ಒಟ್ಟಾರೆ ರೂ.297 ಕೋಟಿ ಪರಿಹಾರವನ್ನು ತೊಂದರೆಗೆ ಒಳಪಟ್ಟವರಿಗೆ ಹಾಗೂ ರೈತರಿಗೆ ಪಾವತಿಸಲಾಗಿದೆ ಎಂದರು.

Share News

About BigTv News

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *