Breaking News

ಕೃಷ್ಣಾ ಮೇಲ್ದಂಡೆ ಯೋಜನೆ-3 ಪೂರ್ಣಗೊಳಿಸಲು ಸರ್ಕಾರ ಬದ್ಧ: ಸಿಎಂ ಸಿದ್ದರಾಮಯ್ಯ

ಬೆಳಗಾವಿ : ಆಲಮಟ್ಟಿ ಜಲಾಶಯದ ನೀರಿನ ಸಂಗ್ರಹ ಮಟ್ಟವನ್ನು ಆರ್.ಎಲ್. 519.60 ಮೀ. ನಿಂದ 524.26 ಮೀ. ರವರೆಗೆ ಎತ್ತರಿಸಿ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3 ಪೂರ್ಣಗೊಳಿಸಲು ಸರ್ಕಾರ ಬದ್ಧವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3 ರಡಿ ಭೂಸ್ವಾಧೀನ, ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕುರಿತ ಸಭೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಹಂತ ಹಂತವಾಗಿ ಯೋಜನೆಯನ್ನು ಪೂರ್ಣಗೊಳಿಸಲಾಗುವುದು.
ಯೋಜನೆಗಾಗಿ ಮುಳುಗಡೆ ಹೊಂದಲಿರುವ ಜಮೀನು, ಪುನರ್ವಸತಿ ಹಾಗೂ ಕಾಲುವೆ ನಿರ್ಮಾಣಕ್ಕಾಗಿ ಅಂದಾಜು ಒಟ್ಟಾರೆ 1,33,867 ಎಕರೆ ಜಮೀನು ಸ್ವಾಧೀನಪಡಿಸಬೇಕಾಗಿದೆ. ಇದುವರೆಗೆ 28,967 ಎಕರೆ ಸ್ವಾಧೀನಪಡಿಸಲಾಗಿದ್ದು, 1,04,963 ಎಕರೆ ಸ್ವಾಧೀನಪಡಿಸಲು ಬಾಕಿಯಿದೆ ಎಂದರು.
ಜಲಾಶಯದ ಹಿನ್ನೀರಿನಿಂದ ಮುಳುಗಡೆಯಾಗಲಿರುವ 188 ಗ್ರಾಮಗಳಿಗೆ ಸಂಬಂಧಿಸಿದಂತೆ 73,020 ಎಕರೆ ಜಮೀನು ಭೂಸ್ವಾಧೀನಕ್ಕೆ ಬಾಕಿಯಿದೆ. 2022ರಲ್ಲಿ ಅಂದಿನ ಸರ್ಕಾರ ಮುಳುಗಡೆಯಾಗುವ ಜಮೀನನ್ನು ಎರಡು ಹಂತದಲ್ಲಿ ಭೂಸ್ವಾಧೀನಪಡಿಸುವ ನಿರ್ಧಾರ ಕೈಗೊಂಡಿತ್ತು. ಇದನ್ನು ಬದಲಾಯಿಸಿ ಈಗ ಪ್ರಥಮ ಪ್ರಾಶಸ್ತ್ಯದಲ್ಲಿ ಒಂದೇ ಹಂತದಲ್ಲಿ ಈ ಜಮೀನು ಭೂಸ್ವಾಧೀನಕ್ಕೆ ಕ್ರಮ ಕೈಗೊಳ್ಳಲಾಗುವುದು.
ಜಮೀನು ಕಳೆದುಕೊಳ್ಳುವ ರೈತರಿಗೆ ಜಮೀನಿನ ಮಾರುಕಟ್ಟೆ ದರ, ಆಸ್ತಿಯ ಮಾರ್ಗದರ್ಶಿ ಮೌಲ್ಯ, ಭೂಸ್ವಾಧೀನ ಕಾಯ್ದೆಯನ್ನು ಗಮನದಲ್ಲಿರಿಸಿ ನ್ಯಾಯಯುತ ಪರಿಹಾರ ಒದಗಿಸಲು ಸರ್ಕಾರ ಬದ್ಧವಾಗಿದೆ. ರೈತರಿಗಾಗಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಜಮೀನಿಗೆ ಪರಿಹಾರ ನೀಡುವ ಕುರಿತು ಸಹಮತದ ದರ ನಿಗದಿಪಡಿಸಲು ಎಲ್ಲರೂ ಮುಂದೆ ಬರಬೇಕು. ರೈತರಿಗೂ ಅನ್ಯಾಯವಾಗಬಾರದು, ಸರ್ಕಾರಕ್ಕೂ ಹೊರೆಯಾಗದಂತೆ ನಿರ್ಣಯಕ್ಕೆ ಬರಲಾಗುವುದು. ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ 20ಸಾವಿರ ಪ್ರಕರಣಗಳು ನ್ಯಾಯಾಲಯದಲ್ಲಿವೆ. ಈ ಪ್ರಕರಣಗಳನ್ನು ಹಿಂಪಡೆದುಕೊಂಡು ಸಹಮತದ ಮೂಲಕ ಬಗೆಹರಿಸಲು ಪ್ರಯತ್ನಿಸಬೇಕು ಎಂದರು.

Share News

About BigTv News

Check Also

ರಾಯಚೂರಿನಲ್ಲಿ ದಂಪತಿ ಸೇರಿ ನಾಲ್ವರು ಸಾವು; ಪತ್ನಿ, ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ!

ರಾಯಚೂರು: ವೈಯಕ್ತಿಕ ವ್ಯವಹಾರದಲ್ಲಿ ಭಾರಿ ನಷ್ಟ ಉಂಟಾದ ಹಿನ್ನೆಲೆಯಲ್ಲಿ ಪತಿಯೇ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, …

Leave a Reply

Your email address will not be published. Required fields are marked *