ಕಲಬುರಗಿ: ಒಳ ಮೀಸಲಾತಿ ಜಾರಿಯನ್ನು ಯಥಾವತ್ತಾಗಿ ಅನುಷ್ಠಾನ, ಆದಿಜಾಂಭವ, ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಡಾ. ಬಾಬು ಜಗಜೀವನರಾಂ ಅಭಿವೃದ್ಧಿ ನಿಗಮಗಳಿಗೆ ಹೆಚ್ಚಿನ ಅನುದಾನ ಬಿಡುಗಡೆ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಡಾ.ಬಾಬು ಜಗಜೀವನರಾಂ ಅಭಿವೃದ್ಧಿ ಮತ್ತು ಹೋರಾಟ ಸಮಿತಿಯ ಜಿಲ್ಲಾ ಮುಖಂಡರು ನಗರದಲ್ಲಿ ಗುರುವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಟೌನ್‌ಹಾಲ್ ಮುಂಭಾಗದ ಡಾ.ಬಾಬು ಜಗಜೀವನರಾಂ ಮೂರ್ತಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ನ್ಯಾ.ನಾಗಮೋಹನದಾಸ್ ಅವರ ಒಳಮೀಸಲಾತಿ ದತ್ತಾಂಶದಲ್ಲಿ ಯಾವುದೇ ತಾರತಮ್ಯ ಮಾಡದೆ ಮಾದಿಗರಿಗೆ ಶೇ 6ರಷ್ಟು, ಹೊಲೆಯ ಸಂಬಂಧಿತ ಜಾತಿಗಳಿಗೆ ಶೇ 5ರಷ್ಟು, ಲಂಬಾಣಿ ಮತ್ತು ಭೋವಿ ಸಮುದಾಯಗಳಿಗೆ ಶೇ 3ರಷ್ಟು ಹಾಗೂ ಅಲೆಮಾರಿ ಜನಾಂಗಕ್ಕೆ ಶೇ 1ರಷ್ಟು ಮೀಸಲಾತಿ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಯಾವುದೇ ಇಲಾಖೆಗೆ ಹೆಚ್ಚಿನ ಅನುದಾನ ನಿಗದಿಪಡಿಸಿಲ್ಲ. ಇದರಿಂದ ಅರ್ಹರಿಗೆ ಹೊಸ ಯೋಜನೆಗಳ ಲಾಭ ಸಿಗುತ್ತಿಲ್ಲ. ಅನುದಾನವಿಲ್ಲದೆ ಗುತ್ತಿಗೆದಾರರು, ಶೋಷಿತ ವರ್ಗದವರು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಎಲ್ಲಾ ಇಲಾಖೆಗಳಿಗೆ ಅನುದಾನವನ್ನು ನೀಡಿ, ಬಡವರ ನೆರವಿಗೆ ಬರಬೇಕು ಎಂದು ಒತ್ತಾಯಿಸಿದರು.
ಬಡವರು ಹಾಗೂ ಶೋಷಿತರಿಗೆ ರಾಜೀವಗಾಂಧಿ ಅವಾಸ್ ಯೋಜನೆ ಮನೆಗಳು ಮಂಜೂರಾತಿ ಸಂಖ್ಯೆ ಹೆಚ್ಚಿಸಬೇಕು. ಐದು ಗ್ಯಾರಂಟಿ ಯೋಜನೆಗಳು ಜಾರಿ ಮಾಡಿದ್ದು ಸ್ವಾಗತಿಸುತ್ತೇವೆ. ಆದರೆ, ಈ ಯೋಜನೆಗಳನ್ನು ಕೊಡಲು ಜನರ ಮೇಲೆ ಹೊರೆಹಾಕಿ, ಅಬಕಾರಿ ಮತ್ತು ನೋಂದಣಿ, ಮುದ್ರಾಂಕ ಕಾಗದ ಬೆಲೆ ಏರಿಸಿ, ತೊಂದರೆ ನೀಡಿದಂತಾಗುತ್ತದೆ. ಕೂಡಲೇ ಅದನ್ನು ಸರಿಪಡಿಸಿ, ಕೆಲ ವಸ್ತುಗಳ ಬೆಲೆ ತಗ್ಗಿಸಬೇಕು ಎಂದರು.
ಏಪ್ರಿಲ್ 5ರ ಡಾ. ಬಾಬು ಜಗಜೀವನರಾಂ ಅವರ ಜನ್ಮದಿನಾಚರಣೆಗೆ ಸರ್ಕಾರಿ ರಜೆ ಘೋಷಿಸಿ, ಎಲ್ಲಾ ಇಲಾಖೆಗಳಲ್ಲಿ ಜನ್ಮ ದಿನಾಚರಣೆ ಆಚರಿಸುವಂತೆ ಆದೇಶಿಸಬೇಕು. ಅವರ ಜೀವನ ಚರಿತ್ರೆಯ ಬಗ್ಗೆ ಪಠ್ಯಪುಸ್ತಕ ಹೊರತರಬೇಕು. ಕಾಯಕಯೋಗಿ ಶಿವಶರಣ ಮಾದಾರ ಚನ್ನಯ್ಯ ಜನ್ಮದಿನಾಚರಣೆ ಸರ್ಕಾರವೇ ಆಚರಿಸಬೇಕು. ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಎಸ್‌ಸಿ, ಎಸ್‌ಟಿಗೆ ಯಾವುದೇ ಯೋಜನೆ ಅಡಿಯಲ್ಲಿ ಸಾಲ ನೀಡದೆ ನಿರಾಕರಿಸುತ್ತಿರುವ ಅಧಿಕಾರಿಗಳ ಮೇಲೆ ಶಿಸ್ತುಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ದಶರಥ ಕಲಗುರ್ತಿ, ರಾಜು ವಾಡೇಕರ್, ಪರಮೇಶ್ವರ ಖಾನಾಪುರ, ಶಾಮ್ ನಾಟೇಕರ್, ಗೋಪಿಕೃಷ್ಣ ಗುಡೇನವರ, ನಾಗರಾಜ ಗುಂಡಗುರ್ತಿ, ಬಾಬುರಾವ ಸುಂಠಾಣ, ರಮೇಶ ವಾಡೇಕರ್, ಮಲ್ಲಪ್ಪ ಚಿಗನೂರ ಸೇರಿ ಹಲವರು ಪಾಲ್ಗೊಂಡಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

