Breaking News

ಮುಂಬರುವ ವರ್ಷದಲ್ಲಿ ರೈತರಿಗೆ ರಾಷ್ಟ್ರೀಯ ಸಹಾಯವಾಣಿ ಸೇವೆ ಸ್ಥಾಪನೆ ಸಾಧ್ಯತೆ

ನವದೆಹಲಿ: ಪಿಎಂ ಕಿಸಾನ್ ಇತ್ಯಾದಿ ಯೋಜನೆಗಳ ಮೂಲಕ ರೈತರಿಗೆ ನೆರವಾಗುತ್ತಿರುವ ಕೇಂದ್ರ ಸರ್ಕಾರ ಇದೀಗ ಮತ್ತೊಂದು ಮಹತ್ವದ ಕ್ರಮಕ್ಕೆ ಸಜ್ಜಾಗಿದೆ. ವರದಿಯ ಪ್ರಕಾರ ಮುಂಬರುವ ವರ್ಷದಲ್ಲಿ ರೈತರಿಗಾಗಿ ರಾಷ್ಟ್ರೀಯ ಸಹಾಯವಾಣಿ ಸೇವೆ ಆರಂಭಿಸುವ ಸಾಧ್ಯತೆ ಇದೆ. ದೆಹಲಿ ಎನ್​ಸಿಆರ್ ಪ್ರದೇಶದಲ್ಲಿ ಇದಕ್ಕಾಗಿ ಬೃಹತ್ ಕಾಲ್ ಸೆಂಟರ್ ಸ್ಥಾಪನೆಯಾಗಲಿದೆ. ಇದು ಟೋಲ್ ಫ್ರೀ ಹೆಲ್ಪ್​ಲೈನ್ ಆಗಿರಲಿದ್ದು ದೇಶದ ಯಾವುದೇ ಮೂಲೆಯಿಂದಲಾದರೂ ಹೆಲ್ಪ್​ಲೈನ್​ಗೆ ಬರುವ ರೈತರ ಕರೆಗಳಿಗೆ ದಿನದ 24 ಗಂಟೆಯೂ ಸ್ಪಂದನೆ ಸಿಗಲಿದೆ.
ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಕೇಂದ್ರ ಕೃಷಿ ಸಚಿವರೂ ಆಗಿರುವ ಶಿವರಾಜ್ ಸಿಂಗ್ ಚೌಹಾಣ್ ಅವರ ಮಹತ್ವಾಕಾಂಕ್ಷಿ ಐಡಿಯಾ ಇದಾಗಿದೆ. ಕೃಷಿ ಕ್ಷೇತ್ರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೈಗೊಂಡಿರುವ ಯೋಜನೆಗಳ ಬಗ್ಗೆ ಸಮಗ್ರ ಮಾಹಿತಿ, ಹಾಗೂ ಈ ಯೋಜನೆಗಳಲ್ಲಿ ರೈತರಿಗೆ ಏನಾದರೂ ಸಮಸ್ಯೆಗಳಿದ್ದಲ್ಲಿ ಅದನ್ನು ಪರಿಹರಿಸಲು ಸಹಾಯವಾಣಿ ರೂಪಿಸಲಾಗಿದೆ. ಇಡೀ ದೇಶಕ್ಕೆ ಒಂದೇ ಸಹಾಯವಾಣಿ ಸಂಖ್ಯೆ ಇರುತ್ತದೆ.
ಶಿವರಾಜ್ ಸಿಂಗ್ ಚೌಹಾಣ್ ಅವರು ಕೆಲ ತಿಂಗಳ ಹಿಂದೆಯೇ ಇಂಥದ್ದೊಂದು ರೈತ ಸಹಾಯವಾಣಿ ಯೋಜನೆ ಬಗ್ಗೆ ಸುಳಿವು ನೀಡಿದ್ದರು. 2025ರ ಮೊದಲ ಕ್ವಾರ್ಟರ್​ನೊಳಗೆ ಈ ಯೋಜನೆಗೆ ಬಿಡ್​ಗಳನ್ನು ಅಂತಿಮಗೊಳಿಸಬಹುದು. ಟೆಲಿಕಮ್ಯೂನಿಕೇಶನ್ಸ್ ಕನ್ಸಲ್ಟೆಂಟ್ಸ್ ಇಂಡಿಯಾ ಎನ್ನುವ ಸಂಸ್ಥೆ ಈ ಯೋಜನೆಗೆ ಆಸಕ್ತಿ ತೋರಿದೆ.
ರೈತರ ಈ ಸಹಾಯವಾಣಿಯ ಸಂಖ್ಯೆಯನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. 100 ಸೀಟರ್​ಗಳ ಕಾಲ್ ಸೆಂಟರ್ ಸ್ಥಾಪನೆಯಾಗಲಿದ್ದು, ವಾರದ ಏಳೂ ದಿನ ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಸಹಾಯವಾಣಿ ಚಾಲನೆಯಲ್ಲಿರುತ್ತದೆ. ದೇಶದ ಯಾವುದೇ ಮೂಲೆಯಿಂದಲಾದರೂ ಲ್ಯಾಂಡ್​ಲೈನ್ ಮತ್ತು ಮೊಬೈಲ್ ನಂಬರ್​ಗಳಿಂದ ಇದಕ್ಕೆ ಕರೆ ಮಾಡಬಹುದು. ಕನ್ನಡವೂ ಸೇರಿದಂತೆ 22 ಭಾಷೆಗಳಲ್ಲಿ ಸೇವೆ ಇರಲಿದೆ.
ವಿವಿಧ ಪ್ರದೇಶಗಳಿಗೆ ನಿರ್ದಿಷ್ಟ ಸಿಬ್ಬಂದಿಯನ್ನು ನಿಯೋಜಿಸಲಾಗಿರುತ್ತದೆ. ಉದಾಹರಣೆಗೆ, ಕರ್ನಾಟಕದಿಂದ ರೈತರೊಬ್ಬರು ಕರೆ ಮಾಡಿದಾಗ, ಕರ್ನಾಟಕಕ್ಕೆಂದು ನಿಯೋಜಿಸಲಾಗಿರುವ ಟೆಲಿ ಅಡ್ವೈಸರ್​ಗಳ ವಿಭಾಗಕ್ಕೆ ಸ್ವಯಂಚಾಲಿತವಾಗಿ ಕರೆಯು ವರ್ಗಾವಣೆ ಆಗುತ್ತದೆ. ಇದರಿಂದ ಕರ್ನಾಟಕದ ರೈತರು ಕನ್ನಡದಲ್ಲೇ ತಮ್ಮ ಸಮಸ್ಯೆಗಳನ್ನು ಕೇಳಿ ಪರಿಹಾರ ಪಡೆಯಲು ಯತ್ನಿಸಬಹುದು.

Share News

About BigTv News

Check Also

ಅನ್ಯಕೋಮಿನ ಪಾಗಲ್ ಪ್ರೇಮಿಯಿಂದ ಟಾರ್ಚರ್ – ವಿದ್ಯಾರ್ಥಿನಿ ಸೂಸೈಡ್!

ಹಾಸನ: ಪ್ರೀತಿಸುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದಲ್ಲದೆ, ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಬೆದರಿಕೆ ಹಾಕಿದ ಆರೋಪದಿಂದ ಮನನೊಂದ 23 …

Leave a Reply

Your email address will not be published. Required fields are marked *