ಅಮೃತಸರ: ಪಾಕಿಸ್ತಾನದಿಂದ ವ್ಯಾಪಾರದ ಮಾರ್ಗದಲ್ಲಿ ಭಾರತಕ್ಕೆ ತರಲಾಗುತ್ತಿದ್ದ ದಾಖಲೆಯ 2,700 ಕೋಟಿ ರೂ. ಮೌಲ್ಯದ 532 ಕೆ.ಜಿ. ಹೆರಾಯಿನ್ ಅನ್ನು ಅಟ್ಟಾರಿ ಗಡಿಯಲ್ಲಿ ಸೀಮಾ ಸುಂಕ ವಿಭಾಗದ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.ಪಾಕಿಸ್ತಾನದಿಂದ ಭಾರತಕ್ಕೆ ತರಲಾಗುತ್ತಿದ್ದ ರಾಕ್ ಸಾಲ್ಟ್ನ ನೂರಾರು ಚೀಲಗಳ ನಡುವೆ ಮಾದಕವಸ್ತುಗಳಿದ್ದ ಚೀಲಗಳನ್ನು ಬಚ್ಚಿಡಲಾಗಿತ್ತು. ಜತೆಗೆ ಇನ್ನೂ 52 ಕೆಜಿ ತೂಕದ ಒಂದು ಚೀಲ ಸಿಕ್ಕಿದೆ. ಇದರಲ್ಲಿರುವ ಮಿಶ್ರಣದ ಬಗ್ಗೆ ಅನುಮಾನವಿರುವ ಕಾರಣ ಅದನ್ನು ಪರಶೀಲನೆಗೆ ಒಪ್ಪಿಸಲಾಗಿದೆ ಎಂದು ಸೀಮಾ ಸುಂಕದ (ತಡೆ) ಆಯುಕ್ತ ದೀಪಕ್ ಕುಮಾರ್ ಗುಪ್ತಾ ತಿಳಿಸಿದ್ದಾರೆ.ಭಾರತದ ಸೀಮಾ ಸುಂಕದ ಇತಿಹಾಸದಲ್ಲೇ ಗರಿಷ್ಠ ಪ್ರಮಾಣದ ಮಾದಕವಸ್ತುವನ್ನು ವಶಪಡಿಸಿಕೊಂಡಿರುವ ಮೊದಲ ಪ್ರಕರಣ ಇದಾಗಿದೆ. ಶನಿವಾರ ಮಧ್ಯಾಹ್ನ 1.30ರಲ್ಲಿ ಪಾಕಿಸ್ತಾನದಿಂದ ಬಂದ ಟ್ರಕ್ ಅನ್ನು ಪರಿಶೀಲಿಸಲಾಯಿತು. ಅದರಲ್ಲಿ 600 ಚೀಲಗಳಲ್ಲಿ ರಾಕ್ ಸಾಲ್ಟ್ ಅನ್ನು ಸಾಗಿಸಲಾಗುತ್ತಿತ್ತು. ಇದರ ಮಧ್ಯದಲ್ಲಿದ್ದ ಒಂದು ಚೀಲದಲ್ಲಿ ಬಿಳಿ ಬಣ್ಣದ ಪುಡಿ ಕಾಣಿಸಿತು. ತಕ್ಷಣವೇ ಅದನ್ನು ಪರಿಶೀಲಿಸಿದಾಗ ಅದು ಹೆರಾಯಿನ್ ಎಂಬುದು ಸ್ಪಷ್ಟವಾಯಿತು. ಇಂತಹ ವಸ್ತು ಇದ್ದ 15 ಚೀಲಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ರೀತಿ ಸಂಘಟಿತವಾಗಿ ಅಂತಾರಾಷ್ಟ್ರೀಯ ಮಟ್ಟದ ಮಾದಕವಸ್ತು ಕಳ್ಳಸಾಗಾಣಿಕೆಯನ್ನು ಪತ್ತೆ ಹಚ್ಚಲಾಯಿತು ಎಂದು ವಿವರಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





