ಬೆಂಗಳೂರು: ವಿವಿಧ ಇಲಾಖೆ/ನಿಗಮಗಳು ಸೇರಿ ಒಟ್ಟು 747 ವಿವಿಧ ವೃಂದದ ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕ್ರಿಯೆ ನಡೆಸಿಕೊಡುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಕೋರಿಕೆ ಸಲ್ಲಿಸಿದ್ದು, ಸರ್ಕಾರದ ಅಂತಿಮ ಒಪ್ಪಿಗೆ ಸಿಕ್ಕಿದ ನಂತರ ಅರ್ಜಿ ಆಹ್ವಾನಿಸಿ, ಲಿಖಿತ ಪರೀಕ್ಷೆ ನಡೆಸಲಾಗುವುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.
ಕೃಷಿ ಮಾರಾಟ ಇಲಾಖೆ, ತಾಂತ್ರಿಕ ಶಿಕ್ಷಣ ಇಲಾಖೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ, ವಾಯುವ್ಯ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆ- ಈ ಏಳು ಸಂಸ್ಥೆಗಳು ನೇಮಕಾತಿ ಸಂಬಂಧ ಕ್ರಮ ತೆಗೆದುಕೊಳ್ಳುವಂತೆ ಕೋರಿಕೆ ಸಲ್ಲಿಸಿದ್ದವು. ಆ ಪ್ರಕಾರ ಸಂಕ್ಷಿಪ್ತ ಅಧಿಸೂಚನೆ ಕೂಡ ಹೊರಡಿಸಲಾಗಿತ್ತು. ಆದರೆ, ಸದರಿ ಸಂಸ್ಥೆಗಳು ವಿವಿಧ ಕಾರಣಗಳನ್ನು ನೀಡಿ ವಿವರವಾದ ಅಧಿಸೂಚನೆಗೆ ಸಮಯ ಕೋರಿರುವ ಕಾರಣಕ್ಕೆ ತಕ್ಷಣಕ್ಕೆ ಅರ್ಜಿ ಆಹ್ವಾನಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ನಡುವೆ ಒಳಮೀಸಲಾತಿ ಸಂಬಂಧ ತೀರ್ಮಾನ ಆಗುವವರೆಗೂ ನೇಮಕಾತಿ ಪ್ರಕ್ರಿಯೆಗೆ ತಡೆ ನೀಡಿ ಸರ್ಕಾರ ಸುತ್ತೋಲೆ ಹೊರಡಿಸಿದೆ. ಹೀಗಾಗಿ ಸರ್ಕಾರ ಅನುಮತಿ ಕೊಟ್ಟ ನಂತರ ಆದಷ್ಟು ಬೇಗ ಪರೀಕ್ಷೆಗಳನ್ನು ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

