ಬೆಳಗಾವಿ: ಬೆಳಗಾವಿಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ ಭೀಕರ ರಸ್ತೆ ಅಪಘಾತದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಎಂಎಲ್ಸಿ ಚೆನ್ನರಾಜ ಹಟ್ಟಿಹೊಳಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಗ್ರಾಮದಲ್ಲಿ ಘಟನೆ ನಡೆದಿದೆ. ರಸ್ತೆಯಲ್ಲಿ ಅಡ್ಡಬಂದ ನಾಯಿ ತಪ್ಪಿಸಲು ಹೋಗಿ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.
ಸಿಎಲ್ಪಿ ಸಭೆ ಮುಗಿಸಿ ನಿನ್ನೆ ತಡರಾತ್ರಿ ಬೆಂಗಳೂರಿನಿಂದ ಬೆಳಗಾವಿಗೆ ಹೊರಟ್ಟಿದ್ದ ಲಕ್ಷ್ಮೀ ಹೆಬ್ಬಾಳಕರ್ ರಸ್ತೆ ಮಾರ್ಗದ ಮೂಲಕ ಬರುತ್ತಿದ್ದರು. ಅಂಬಡಗಟ್ಟಿ ಗ್ರಾಮದ ಬಳಿ ಅಡ್ಡಬಂದ ನಾಯಿ ತಪ್ಪಿಸಲು ಹೋಗಿ ಮರಕ್ಕೆ ಕಾರು ಡಿಕ್ಕಿಯಾಗಿದೆ.
ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ
ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಬೆನ್ನು, ಮುಖಕ್ಕೆ ಸಣ್ಣಪುಟ್ಟ ಗಾಯವಾಗಿದ್ದು, ಎಂಎಲ್ಸಿ ಚೆನ್ನರಾಜ ಹಟ್ಟಿಹೊಳಿ ತಲೆಗೆ ಗಾಯಯಾಗಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳಕರ್ಗೆ ಬೆಳಗಾವಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇಂದು ಬೆಳಗಿನಜಾವ 6 ಗಂಟೆ ವೇಳೆಗೆ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.
ಸಚಿವೆ ಹೆಬ್ಬಾಳ್ಕರ್ ಬೆನ್ನಿಗೆ ಬಲವಾದ ಪೆಟ್ಟು
ಹೆಬ್ಬಾಳ್ಕರ್ ಆರೋಗ್ಯದ ಕುರಿತು ಮಾಹಿತಿ ನೀಡಿದ, ಡಾ. ರವಿ ಪಾಟೀಲ ಅವರು, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬೆನ್ನಿಗೆ ಪೆಟ್ಟು ಬಿದ್ದಿದೆ ಎಂದರು. ಹೆಬ್ಬಾಳ್ಕರ್ ಬೆನ್ನಿನ L1 ಹಾಗೂ L4 ಫ್ರ್ಯಾಕ್ಚರ್ ಆಗಿರುವುದು ದೃಢವಾಗಿದೆ. ಎಂಆರ್‌ಐ ಸ್ಕ್ಯಾನ್‌ನಲ್ಲಿ ಎರಡು ಕಡೆ ಪ್ಯಾಕ್ಚರ್ ಆಗಿರುವುದು ತಿಳಿದುಬಂದಿದೆ. ಪೇನ್‌ಕಿಲ್ಲರ್ ಕೊಟ್ಟು ಚಿಕಿತ್ಸೆ ನೀಡಲಾಗುತ್ತಿದ್ದು, ಈಗ ಸುಧಾರಿಸಿಕೊಳ್ಳುತ್ತಿದ್ದಾರೆ. ಎರಡು ದಿನಗಳ ಕಾಲ ಚಿಕಿತ್ಸೆ ನೀಡಿ ಡಿಶ್ಚಾರ್ಜ್ ಮಾಡುತ್ತೇವೆ. ಒಂದು ತಿಂಗಳ ಕಾಲ ಬೆಡ್ ರೆಸ್ಟ್ ಮಾಡಲೇಬೇಕು. ಚನ್ನರಾಜ್ ಹಟ್ಟಿಹೊಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಚಾಲಕ ಹಾಗೂ ಗನ್ ಮ್ಯಾನ್‌ಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದ ಡಾ. ರವಿ ಪಾಟೀಲ ಮಾಹಿತಿ ನೀಡಿದರು.
ಆರೋಗ್ಯ ವಿಚಾರಿಸಿದ ಸಿಎಂ
ಇನ್ನು ಅಪಘಾತದ ವಿಚಾರ ತಿಳಿಯುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಅವರು ದೂರವಾಣಿ ಕರೆ ಮೂಲಕ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಆರೋಗ್ಯ ವಿಚಾರಿಸಿದರು. ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಬೆಳಗಾವಿಯ ವಿಜಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೆಬ್ಬಾಳ್ಕರ್ ಪಿಎ ಸಂಗನಗೌಡ ನಂಬರ್‌ಗೆ ಫೋನ್ ಮಾಡಿದ ಸಿಎಂ ಸಿದ್ದರಾಮಯ್ಯ ಆರೋಗ್ಯ ವಿಚಾರಿಸಿದ್ದಾರೆ. ಸಣ್ಣಪುಟ್ಟ ಗಾಯಗಳಾಗಿವೆ ಚೇತರಿಸಿಕೊಳ್ಳುತ್ತಿದ್ದೇನೆ ಎಂದು ಸಿಎಂಗೆ ಸಚಿವೆ ಮಾಹಿತಿ ನೀಡಿದ್ದು, ಬೇಗ ಗುಣಮುಖರಾಗುವಂತೆ ಸಿದ್ದರಾಮಯ್ಯ ಅವರಿಗೆ ಧೈರ್ಯ ತುಂಬಿದ್ದಾರೆ.
ಹೆಬ್ಬಾಳ್ಕರ್ ತಮ್ಮನಿಗೆ ಪರಮೇಶ್ವರ್ ಕರೆ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಾರು ಅಪಘಾತ ವಿಚಾರದ ಕುರಿತು ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಪರಮೇಶ್ವರ್, ಬೆಳಗಿನ ಜಾವ ಅಪಘಾತ ಆಗಿದೆ. ಕಾರು ಜೋರಾಗಿಯೇ ಜಖಂ ಆಗಿದೆ. ಸೀರಿಯಸ್ ಅಂತದ್ದು ಏನು ಆಗಿಲ್ಲ. ಅವರ ಜೊತೆ ಮಾತನಾಡಲು ಆಗಲಿಲ್ಲ, ಅವರ ತಮ್ಮನ ಜೊತೆ ಮಾತಾಡಿದೆ ಎಂದು ತಿಳಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

