ಕಲಬುರಗಿ: ಕಲಬುರಗಿ ವಿಭಾಗದ ಎಲ್ಲ ಜಿಲ್ಲೆಯ ಅರ್ಹ ಫಲಾನುಭವಿಗಳಿಗೆ ಕಾರ್ಮಿಕ ಇಲಾಖೆಯ ಸೌಲಭ್ಯಗಳನ್ನು ಒದಗಿಸಬೇಕು. ಇಲಾಖೆ ಯೋಜನೆಗಳ ಕುರಿತು ಹೆಚ್ಚಿನ ಮಟ್ಟದಲ್ಲಿ ಪ್ರಚಾರ ಕೈಗೊಳ್ಳಬೇಕೆಂದು ಕಾರ್ಮಿಕ ಇಲಾಖೆಯ ಸಚಿವರಾದ ಸಂತೋಷ ಎಸ್.ಲಾಡ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಕಲ್ಬುರ್ಗಿ ವಿಭಾಗದ ಕಾರ್ಮಿಕ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಲ್ಬುರ್ಗಿ ಭಾಗದ ಎಲ್ಲ ಜಿಲ್ಲೆಗಳಲ್ಲಿ ಇಲಾಖೆಯ ಯೋಜನೆಗಳು ಅಚ್ಚುಕಟ್ಟಾಗಿ ಅನುಷ್ಠಾನವಾಗಬೇಕು. ಏನಾದರು ಸಲಹೆ ಸೂಚನೆಗಳಿದ್ದಲ್ಲಿ ಅದನ್ನು ಲಿಖಿತ ರೂಪದಲ್ಲಿ ತೆಗೆದುಕೊಳ್ಳಬೇಕು. ಎಲ್ಲ ಕಚೇರಿಗಳಲ್ಲಿ ಸಹಾಯವಾಣಿ ಇರಬೇಕು. ಇಲಾಖೆಯ ಯೋಜನೆಗಳ ಕುರಿತು ಪ್ರತಿ ತಿಂಗಳು ಪ್ರಗತಿ ಪರಶೀಲನೆ ನಡೆಸಿ, ಕಚೇರಿಗೆ ವರದಿಯನ್ನು ಕಳಿಸಿಕೊಡಬೇಕು. ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಕಲ್ಬುರ್ಗಿ ವಿಭಾಗದ ಎಲ್ಲ ಜಿಲ್ಲೆಯ ವಿಧಾನಸಭಾ ಕ್ಷೇತ್ರದ ಶಾಸಕರಿಗೆ ಇಲಾಖೆಯ ಯೋಜನೆಗಳ ಕುರಿತು ಮಾಹಿತಿ ನೀಡಬೇಕು. ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರತಿಯೊಂದು ತಾಲೂಕಿನಲ್ಲಿ ತಾಲೂಕು ಮಟ್ಟದಲ್ಲಿ ಕಾರ್ಯಗಾರವನ್ನು ಕಾಲಕಾಲಕ್ಕೆ ಹಮ್ಮಿಕೊಳ್ಳಬೇಕು. ಇಲಾಖೆಯ ಅಧಿಕಾರಿಗಳು ತಮ್ಮ ವ್ಯಾಪ್ತಿಯೊಗೆ ಇರುವ ಸಂಸ್ಥೆಗಳಲ್ಲಿ ಕನಿಷ್ಠ ವೇತನ ದರಗಳು, ವೇತನ ಪಾವತಿ ದಿನಾಂಕವನ್ನು ಕಡ್ಡಾಯ ಸಂಸ್ಥೆಯ ಸೂಚನಾ ಫಲಕದಲ್ಲಿ ಅಳವಡಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದರು.
ರಾಜ್ಯದಲ್ಲಿ ಈಗಾಗಲೇ ಕಾರ್ಮಿಕರಿಗೆ ಕಾರ್ಡುಗಳನ್ನು ವಿತರಿಸಲಾಗಿದೆ. ಮೂರ್ನಾಲ್ಕು ವರ್ಷಗಳಲ್ಲಿ ಕಾರ್ಮಿಕರ ನೋಂದಣಿ ಹೆಚ್ಚಳವಾಗಿದೆ. ಅನರ್ಹರೂ ಈ ಪಟ್ಟಿಯಲ್ಲಿ ಸೇರಿರಬಹುದಾದ ಆತಂಕವಿದೆ. ಅನರ್ಹರಿಗೆ ಕಾರ್ಡ್ ಕೊಟ್ಟಲ್ಲಿ ಅಧಿಕಾರಿ-ಸಿಬ್ಬಂದಿಯ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಏನಾದರು ಅಕ್ರಮಗಳು ನಡೆದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿಸಲಾಗುವುದು ಎಂದರು.
ಎಸ್.ಸಿ ಮತ್ತು ಎಸ್.ಟಿ ಮಾಲೀಕತ್ವದ ಉದ್ಯಮಗಳಿಗೆ ನೆರವು ಎಸ್.ಸಿ ಎಸ್.ಟಿ ಸಮುದಾಯದವರ ಮಾಲೀಕತ್ವದ ಉದ್ದಿಮೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಸಹಾಯಧನ ನೀಡಲಾಗುತ್ತಿದೆ. ಅಲ್ಲದೇ ಅದೇ ಕೈಗಾರಿಕೆಯಲ್ಲಿ ಕಾಯಂ ನೌಕರನಾಗಿ ನೇಮಕಗೊಂಡಿದ್ದಲ್ಲಿ ಅವರ ಕಾರ್ಯನಿರ್ವಹಣಾ ಅವಧಿಯ ಪಿ.ಎಫ್ ಸೇರಿದಂತೆ ಇತರೆ ಸೌಲಭ್ಯಗಳ ಶುಲ್ಕ ಇಲಾಖೆಯಿಂದಲೇ ಭರಿಸಲಾಗುವುದು ಎಂದರು.
ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ನೋಂದಾಯಿತ ಕಾರ್ಮಿಕರಿಗೆ ಕಿಟ್‍ಗಳನ್ನು ಹಾಗೂ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಲ್ಲಿ ಸ್ಮಾರ್ಟ್ ಕಾಡ್ರ್ಗಳನ್ನು ವಿತರಿಸುವ ಸಮಯದಲ್ಲಿ ಸ್ಥಳೀಯ ಶಾಸಕರು ಹಾಗೂ ಸಂಸದರನ್ನು ಆಹ್ವಾನಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಕಲ್ಬುರ್ಗಿ ಭಾಗದ ಎಲ್ಲ ಜಿಲ್ಲೆಗಳಲ್ಲಿ ಕಾರ್ಮಿಕ ಇಲಾಖೆಯಿಂದ ಬಾಲ ಕಾರ್ಮಿಕ & ಕಿಶೋರ ಕಾರ್ಮಿಕ ಕಾಯ್ದೆಯಡಿ ಸುಮಾರು 5,327 ತಪಾಸಣೆ ಕೈಗೊಳ್ಳಲಾಗಿದ್ದು, 226 ಬಾಲ ಕಾರ್ಮಿಕ & ಕಿಶೋರ ಕಾರ್ಮಿಕ ಕಾಯ್ದೆ ಪ್ರಕರಣಗಳು ಪತ್ತೆಯಾಗಿವೆ. ಈ ಸಂಬಂಧ ಮೊಕದ್ದಮೆಗಳನ್ನು ಹೂಡಲಾಗಿದೆ. 226 ಬಾಲ ಕಾರ್ಮಿಕ & ಕಿಶೋರ ಕಾರ್ಮಿಕರಿಗೆ ಪುನರ್ವಸತಿ ಕಲ್ಪಿಸಲಾಗಿದೆ ಎಂದರು.
ಸೌಲಭ್ಯ ವಿತರಣೆ: ಈ ವೇಳೆ ಕಾರ್ಮಿಕ ಇಲಾಖೆಯ ವಿವಿಧ ಯೋಜನೆಗಳಲ್ಲಿ ಅರ್ಹ ಫಲಾನುಭವಿಗಳಿಗೆ ಸಚಿವರಿಂದ ಸೌಲಭ್ಯದ ಕಿಟ್ ಮತ್ತು ಚೆಕ್ ಗಳನ್ನು ವಿತರಿಸಲಾಯಿತು.
ಕಾರ್ಮಿಕ ಇಲಾಖೆಯ ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕರಾದ ಬಸನಗೌಡ ದದ್ದಲ್, ಮಾನ್ವಿ ವಿಧಾನಸಭೆ ಕ್ಷೇತ್ರದ ಶಾಸಕರಾದ ಜಿ.ಹಂಪಯ್ಯ ನಾಯಕ್, ದೇವದುರ್ಗ ವಿಧಾನಸಭೆ ಕ್ಷೇತ್ರದ ಶಾಸಕರಾದ ಕರೆಮ್ಮ ಜಿ.ನಾಯಕ, ಆಯುಕ್ತರಾದ ಡಾ.ಹೆಚ್.ಎನ್.ಗೋಪಾಲಕೃಷ್ಣ, ಜಿಲ್ಲಾಧಿಕಾರಿಗಳಾದ ನಿತೀಶ್ ಕೆ., ಕಾರ್ಮಿಕ ಇಲಾಖೆಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಕಾರ್ಯದರ್ಶಿಯಾದ ಭಾರತಿ ಡಿ., ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ತುಕಾರಂ ಪಾಂಡ್ವೆ, ಎಂ. ಪುಟ್ಟಮಾದಯ್ಯ ಸೇರಿದಂತೆ ಕಲ್ಬುರ್ಗಿ ವಿಭಾಗದ ಎಲ್ಲ ಜಿಲ್ಲಾ ಕಾರ್ಮಿಕ ಅಧಿಕಾರಿಗಳು ಹಾಗೂ ಕಾರ್ಮಿಕ ನಿರೀಕ್ಷಕರು ಸೇರಿದಂತೆ ಇತರರು ಇದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

