ಬೆಂಗಳೂರು: ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಲ್ಲಿಸಿರುವ ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ- 2015’ರ ದತ್ತಾಂಶಗಳ ಅಧ್ಯಯನ ವರದಿಯ ಮುಚ್ಚಿದ ಲಕೋಟೆಯನ್ನು ತೆರೆಯುವ ಕುರಿತು ರಾಜ್ಯ ಸರ್ಕಾರ ಗುರುವಾರ ನಿರ್ಧರಿಸಲಿದೆ.
ಮುಚ್ಚಿದ ಲಕೋಟೆಯನ್ನು ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮಂಡಿಸಲಿದೆ.
ಸಭೆಯ16ನೇ ಕಾರ್ಯಸೂಚಿಯಲ್ಲಿ ಈ ವಿವರವನ್ನು ನೀಡಲಾಗಿದೆ. ಆದರೆ, ವರದಿಗೆ ಸಂಬಂಧಿಸಿದ ಇತರ ಯಾವುದೇ ಮಾಹಿತಿಯನ್ನು ಕಾರ್ಯಸೂಚಿಯ ಜೊತೆಗೆ ನೀಡಿಲ್ಲ.
ಮುಚ್ಚಿದ ಲಕೋಟೆಯನ್ನು ತೆರೆಯಬೇಕೇ? ಬೇಡವೇ? ತೆರೆದ ನಂತರ ಮುಂದೇನು ಮಾಡಬೇಕು? ಸಚಿವ ಸಂಪುಟ ಉಪ ಸಮಿತಿ ರಚಿಸಬೇಕೇ ಅಥವಾ ವಿಧಾನ ಮಂಡದಲ್ಲಿ ವರದಿಯನ್ನು ಮಂಡಿಸಬೇಕೇ ಎಂಬ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.
ಎಚ್. ಕಾಂತರಾಜ ಅವರು ಆಯೋಗದ ಅಧ್ಯಕ್ಷರಾಗಿದ್ದಾಗ ನಡೆದಿದ್ದ ಈ ಸಮೀಕ್ಷೆಯ ವರದಿಯನ್ನು ಜಯಪ್ರಕಾಶ ಹೆಗ್ಡೆ ಅವರ ನೇತೃತ್ವದ ಆಯೋಗವು ಕಳೆದ ಫೆಬ್ರವರಿಯಲ್ಲಿ ಸರ್ಕಾರಕ್ಕೆ ಸಲ್ಲಿಸಿತ್ತು. ಕಾಂತರಾಜ ನೇತೃತ್ವದ ಆಯೋಗ ಸಮೀಕ್ಷೆಯ ದತ್ತಾಂಶಗಳನ್ನು ಸಂಗ್ರಹಿಸಿದ್ದು, ಜಯಪ್ರಕಾಶ ಹೆಗ್ಡೆ ಅವರ ಅವಧಿಯಲ್ಲಿ ಶಿಫಾರಸುಗಳ ಸಹಿತ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದೂ ಮೂಲಗಳು ಹೇಳಿವೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

