ನವದೆಹಲಿ: ಹತ್ತಿ ಬೆಳೆಯುವ ರೈತರಿಗೆ ಡ್ರಿಪ್ ಇರಿಗೇಶನ್ ಅನ್ನು ಉತ್ತೇಜಿಸಲು ಬಜೆಟ್ನಲ್ಲಿ 500 ಕೋಟಿ ರೂ. ಒದಗಿಸಿ ಎಂದು ಭಾರತೀಯ ಹತ್ತಿ ಸಂಸ್ಥೆ ಸಿಎಐ ಮನವಿ ಮಾಡಿದೆ. ಭಾರತದಲ್ಲಿ ಶೇ. 67ರಷ್ಟು ಹತ್ತಿಯನ್ನು ಮಳೆಯಾಶ್ರಿತ ಪ್ರದೇಶಗಳಲ್ಲಿ ಬೆಳೆಯಲಾಗುತ್ತಿದೆ.
ಈ ಮಳೆಯಾಶ್ರಿತ ಪ್ರದೇಶಗಳಲ್ಲಿ ಹನಿ ನೀರಾವರಿ ವ್ಯವಸ್ಥೆ ಅಳವಡಿಸುವುದರಿಂದ ಹತ್ತಿ ಫಸಲು ಹೆಚ್ಚಲು ನೆರವಾಗುತ್ತದೆ ಎಂಬುದು ಈ ಸಂಸ್ಥೆಯ ವಾದ.
ಮಳೆಯಾಶ್ರೀತ ಪ್ರದೇಶಗಳಲ್ಲಿ ರೈತರು ನೀರಿಗಾಗಿ ಸಂಪೂರ್ಣವಾಗಿ ಮಳೆಯ ಮೇಲೆಯೇ ಅವಲಂಬಿತರಾಗಿರುತ್ತಾರೆ. ಹತ್ತಿ ಬೆಳವಣಿಗೆಯಲ್ಲಿ ಹೂ ಮತ್ತು ಹಣ್ಣು ಬಿಡುವುದು ಪ್ರಮುಖ ಹಂತವಾಗಿದ್ದು, ಈ ಸಂದರ್ಭದಲ್ಲಿ ನೀರಿನ ಅವಶ್ಯಕತೆ ಅತಿಹೆಚ್ಚು ಇರುತ್ತದೆ. ಹತ್ತಿ ಬೆಳೆಗೆ ಒಟ್ಟಾರೆ ಅಗತ್ಯ ಇರುವ ನೀರಿನಲ್ಲಿ ಶೇ. 80ರಷ್ಟು ಅಗತ್ಯಗಳು ಹೂ ಮತ್ತು ಹಣ್ಣು ಬಿಡುವ ಸಂದರ್ಭದಲ್ಲೇ ಇರುತ್ತವೆ ಎಂದು ಸಿಎಐನ ವಾರ್ಷಿಕ ಮಹಾಸಭೆಯಲ್ಲಿ ಅದರ ಅಧ್ಯಕ್ಷರಾದ ಅತುಲ್ ಗಣಾತ್ರ ಹೇಳಿದ್ದಾರೆ.
ನೀರಾವರಿ ಭೂಮಿಗಳಿಗೆ ಹೋಲಿಸಿದರೆ ಮಳೆಯಾಧರಿತ ಕೃಷಿ ಭೂಮಿಗಳಲ್ಲಿ ಹತ್ತಿ ಬೆಳೆಯ ಫಸಲು ಬಹಳ ಕಡಿಮೆ ಇರುತ್ತದೆ. ಮಹಾರಾಷ್ಟ್ರ, ಕರ್ನಾಟಕ, ಮಧ್ಯಪ್ರದೇಶ, ಆಂಧ್ರಪ್ರದೇಶ, ತಮಿಳುನಾಡು, ಗುಜರಾತ್ ರಾಜ್ಯಗಳಲ್ಲಿ ಮಳೆ ನೀರಿನ ಕೊರತೆಯಿಂದಾಗಿ ಹತ್ತಿ ಫಸಲು ಕಡಿಮೆ ಇದೆ ಎಂದು ಅತುಲ್ ಅವರು ವಿವರಿಸಿದ್ದಾರೆ.
ಮಳೆಯಾಶ್ರಿತ ಪ್ರದೇಶಗಳಲ್ಲಿನ ರೈತರು ಹನಿ ನೀರಾವತಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಉತ್ತೇಜಿಸಲು ಸರ್ಕಾರವು ಬಜೆಟ್ನಲ್ಲಿ ನೆರವು ಒದಗಿಸಬೇಕು. ಡ್ರಿಪ್ ಇರಿಗೇಶನ್ ವಿಧಾನದಿಂದ ಶೇ. 50ರಷ್ಟು ನೀರನ್ನು ಉಳಿಸಲೂ ಸಾಧ್ಯವಾಗುತ್ತದೆ ಎಂದು ಸಿಎಐ ಅಧ್ಯಕ್ಷರು ತಿಳಿಸಿದ್ದಾರೆ.
ಭಾರತದಲ್ಲಿ ಹನಿ ನೀರಾವರಿ ವ್ಯವಸ್ಥೆಯನ್ನು ಸ್ಥಾಪಿಸಲು ಸಾಕಷ್ಟು ವೆಚ್ಚವಾಗುತ್ತದೆ. ಹೀಗಾಗಿ, ಬಜೆಟ್ನಲ್ಲಿ ಕನಿಷ್ಠ 500 ಕೋಟಿ ರೂನಷ್ಟು ನೆರವನ್ನಾದರೂ ಒದಗಿಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.
ಭಾರತದಲ್ಲಿ ಈ ಸೀಸನ್ನಲ್ಲಿ ಹತ್ತಿ ಉತ್ಪಾದನೆ ಶೇ. 7.70ರಷ್ಟು ಕಡಿಮೆ ಆಗಬಹುದು ಎನ್ನುವ ಅಂದಾಜು ಇದೆ. ಕಳೆದ ವರ್ಷ 32.74 ಮಿಲಿಯನ್ ಬೇಲ್ನಷ್ಟು ಹತ್ತಿ ಫಸಲು ಬಂದಿತ್ತು. ಈ ವರ್ಷದ ಸೀಸನ್ನಲ್ಲಿ ಅದು 30.22 ಮಿಲಿಯನ್ ಬೇಲ್ಗೆ ಇಳಿಕೆ ಆಗುವ ನಿರೀಕ್ಷೆ ಇದೆ. 2024-25ರಲ್ಲಿ ಭಾರತವು 2.5 ಮಿಲಿಯನ್ ಬೇಲ್ನಷ್ಟು ಹತ್ತಿಯನ್ನು ಅಮದು ಮಾಡಿಕೊಳ್ಳಬೇಕಾಗಬಹುದು ಎಂದು ಸಿಎಐ ಅಂದಾಜು ಮಾಡಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

