ಬೆಂಗಳೂರು: ನಮ್ಮ ತೆರಿಗೆ ನಮ್ಮ ಹಕ್ಕು ಎಂದು ದಿಲ್ಲಿ ಪರೇಡ್ ನಡೆಸಿ, ಕಾಂಗ್ರೆಸ್ ಮತ್ತು ಐಎನ್‌ಡಿಐಎ ಒಕ್ಕೂಟದ ಪಕ್ಷಗಳ ಆಡಳಿತವಿರುವ ರಾಜ್ಯಗಳ ಹಣಕಾಸು ಸಚಿವರ ಸಭೆ ಆಯೋಜನೆಯಲ್ಲಿ ಮುಂಚೂಣಿಯಲ್ಲಿದ್ದ ರಾಜ್ಯ ಕಾಂಗ್ರೆಸ್ ಸರಕಾರವು ಈಗ ವಿಶ್ವವಿದ್ಯಾನಿಲಯಗಳ ಕುಲಪತಿ ನೇಮಕಾತಿಯಲ್ಲಿ ವಿಷಯ ದಲ್ಲಿ ಕೇಂದ್ರ ಸರಕಾರದ ವಿರುದ್ಧ ಮತ್ತೊಂದು ಹೋರಾಟಕ್ಕೆ ವೇದಿಕೆ ಸಿದ್ಧಪಡಿಸಿಕೊಳ್ಳುತ್ತಿದೆ.
ಯುಜಿಸಿ ನಿಯಮ ತಿದ್ದುಪಡಿಯ ವಿರುದ್ಧ ವಿವಿಧ ರಾಜ್ಯಗಳ ಶಿಕ್ಷಣ ಸಚಿವರನ್ನು ಸಂಘಟಿಸಿ, ಕೇಂದ್ರದ ಮೇಲೆ ಒತ್ತಡ ಹೇರಲು ಮುಂದಾಗಿದೆ. ಈ ಸಂಬಂಧ ಫೆ. 5ರಂದು ಬೆಂಗಳೂರಿನಲ್ಲಿ ಎಲ್ಲ ರಾಜ್ಯಗಳ ಉನ್ನತ ಶಿಕ್ಷಣ ಸಚಿವರ ಸಮಾವೇಶ ಆಯೋಜಿಸಿದ್ದು, ಗುರುವಾರ ಹೊಸದಿಲ್ಲಿಯಲ್ಲಿ ಈ ಕುರಿತು ಉನ್ನತ ಶಿಕ್ಷಣ ಸಚಿವ ಡಾ| ಎಂ.ಸಿ. ಸುಧಾಕರ್ ವಿವರಣೆ ನೀಡಿದ್ದಾರೆ. ಸಮಾವೇಶದಲ್ಲಿ ಯುಜಿಸಿ ನಿಯಮದಲ್ಲಿರುವ ಶಿಕ್ಷಕರ ನೇಮಕಾತಿ ಮತ್ತು ಉತ್ತೇಜನಕ್ಕೆ ಕನಿಷ್ಠ ಅರ್ಹತೆಗಳು, ಶೈಕ್ಷಣಿಕ ಗುಣಮಟ್ಟ ಮತ್ತು ಕರಡು ಬಗ್ಗೆ ಚರ್ಚಿಸಲು ಭಾಗವಹಿಸಲು ಎಲ್ಲ ರಾಜ್ಯಗಳ ಉನ್ನತ ಶಿಕ್ಷಣ ಸಚಿವರನ್ನು ಆಹ್ವಾನಿಸಲಾಗುತ್ತಿದೆ ಎಂದು ಪತ್ರಿಕಾ ಪ್ರಕಟಣೆ ಕೊಟ್ಟಿದ್ದಾರೆ.
ಅಧಿಕಾರ ಮೊಟಕು:
ಯುಜಿಸಿ ಕರಡು ನಿಯಮಾವಳಿ ರಾಜ್ಯಗಳು ನ್ಯಾಯಸಮ್ಮತವಾಗಿ ಹೊಂದಿದ್ದ ಅಧಿಕಾರವನ್ನು ತೀವ್ರ ವಾಗಿ ಮೊಟಕುಗೊಳಿಸುತ್ತದೆ. ಹಲವು ರಾಜ್ಯ ಗಳು ಈಗಾಗಲೇ ಈ ನಿಯಮಗಳ ವಿರುದ್ಧ ವಿರೋಧ ವ್ಯಕ್ತಪಡಿಸಿವೆ. ಕರಡು ನಿಯಮಾವಳಿಗಳ ಸಾಧಕ-ಬಾಧಕ ಚರ್ಚಿಸಲು ಮತ್ತು ಸಾಮಾನ್ಯ ನಿಲುವು ತೆಗೆದುಕೊಳ್ಳಲು ಈ ಸಮಾವೇಶವನ್ನು ಕರೆಯಲಾಗುತ್ತಿದೆ ಎಂದಿದ್ದಾರೆ.
ಒತ್ತಡ ಸೃಷ್ಟಿಸಲು ಸಮಾವೇಶ?
ವಿ.ವಿ.ಗಳಲ್ಲಿ ಕುಲಪತಿ ನೇಮಕ ಸಂಬಂಧಿಸಿ ನಡೆದಿರುವ ಬೆಳವಣಿಗೆ ಗಮನದಲ್ಲಿ ಇಟ್ಟುಕೊಂಡು ಈ ಮೂಲಕ ಕೇಂದ್ರ ಸರಕಾರದ ಮೇಲೆ ಒತ್ತಡ ಸೃಷ್ಟಿಸಲು ಸಮಾವೇಶ ಆಯೋಜಿಸಿರುವ ಸಾಧ್ಯತೆಗಳಿವೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

