ವಿಜಯಪುರ: ನಗರದ ಇಟ್ಟಿಗೆ ಭಟ್ಟಿಯೊಂದರ ಮಾಲೀಕರಿಂದ ಹಲ್ಲೆಗೆ ಒಳಗಾದ ಕಾರ್ಮಿಕರೊಂದಿಗೆ ಶುಕ್ರವಾರ (ಜ.24) ಮುಖ್ಯಮಂತ್ರಿ ಸಿದ್ದರಾಮಯ್ಯ ಫೋನ್ ಮೂಲಕ ಮಾತನಾಡಿದರು.
ನಗರದ ಜಿಲ್ಲಾಸ್ಪತ್ರೆಯಲ್ಲಿ ಮೂವರು ಕಾರ್ಮಿಕರು ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾಜಿ ಸಚಿವ ಎಚ್.ಆಂಜನೇಯ ಇಂದು ಮೂವರು ಕಾರ್ಮಿಕರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದರು.
ಇದೇ ವೇಳೆ, ಸಿಎಂ ಸಿದ್ದರಾಮಯ್ಯ ಅವರಿಗೆ ಫೋನ್ ಮಾಡಿದ ಆಂಜನೇಯ, ಕಾರ್ಮಿಕರೊಂದಿಗೆ ಫೋನ್ ನಲ್ಲಿ ಸಿಎಂ ಅವರಿಂದ ಮಾತನಾಡಿಸಿದರು. ಆಗ ಕಾರ್ಮಿಕರಿಗೆ ಧೈರ್ಯ ತುಂಬಿದ ಸಿದ್ದರಾಮಯ್ಯ, ಎಲ್ಲ ಮಾಹಿತಿಯನ್ನು ಪಡೆದುಕೊಂಡು ಬನ್ನಿ ಎಂದು ಆಂಜನೇಯ ಅವರಿಗೆ ಸೂಚಿಸಿದರು.
ಕಾರ್ಮಿಕರಿಗೆ ವೈಯಕ್ತಿಕವಾಗಿ 50 ಸಾವಿರ ಆರ್ಥಿಕ ನೆರವು: ಕಾರ್ಮಿಕರನ್ನು ಮಾತನಾಡಿಸಿದ ಆಂಜನೇಯ, ಮೂವರು ಕಾರ್ಮಿಕರಿಗೆ ತಲಾ 50 ಸಾವಿರ ರೂಪಾಯಿ ಆರ್ಥಿಕ ನೆರವು ನೀಡಿದರು.
ಅಲ್ಲದೆ, ಕಾರ್ಮಿಕರಿಗೆ ಸರ್ಕಾರದಿಂದ ಜಮೀನು ಹಾಗೂ ಅಗತ್ಯ ನೆರವು ಕಲ್ಪಿಸುವ ಬಗ್ಗೆ ಸಿಎಂ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್ ಅವರೊಂದಿಗೆ ಚರ್ಚಿಸಿ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಬಳಿಕ ಸುದ್ದಿಗಾರರ ಜತೆ ಆಂಜನೇಯ ಮಾತನಾಡಿ, ಕಾರ್ಮಿಕರ ಮೇಲಿನ ಘಟನೆ ಬಗ್ಗೆ ಸಿಎಂ ಜತೆಗೆ ನಿನ್ನೆ ಚರ್ಚೆ ಮಾಡಿದ್ದೆ. ಇಂದು ಕಾರ್ಮಿಕರನ್ನು ಖುದ್ದಾಗಿ ಭೇಟಿ ಮಾಡಿರುವೆ. ಕಾರ್ಮಿಕರ ಮೇಲಿನ ಅಮಾನುಷ ಹಲ್ಲೆ ನಾಗರಿಕ ಸಮಾಜ ತಲೆ ತಗ್ಗಿಸುವ ಕೆಲಸವಾಗಿದೆ ಎಂದರು.
ಅಲ್ಲದೇ, ಈ ಗೂಂಡಾ ಪ್ರವೃತ್ತಿಯ ವಿರುದ್ಧ ಕ್ರಮ ವಹಿಸಬೇಕು. ಆರೋಪಿಗಳನ್ನು ಗಡಿಪಾರು ಮಾಡಬೇಕು. ಅಲ್ಲದೇ, ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

