ರಾಯಚೂರು: ಜಿಲ್ಲೆಯ ಇತಿಹಾಸದಲ್ಲೇ ಅತಿದೊಡ್ಡ ಗಾಂಜಾ ಜಾಲವೊಂದನ್ನು ಭೇದಿಸಿರುವ ಬಳಗಾನೂರು ಠಾಣೆ ಪೊಲೀಸರು, ಕ್ಯೂಆರ್ ಕೋಡ್ ಆಧಾರಿತ ಗುಪ್ತ ವ್ಯವಹಾರ ನಡೆಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಸಿಂಧನೂರು ತಾಲೂಕಿನ ಆರ್.ಎಚ್. ಕ್ಯಾಂಪ್ ನಿವಾಸಿ ದೀನಬಂಧು (53) ಹಾಗೂ ಬಸವರಾಜೇಶ್ವರ ಕ್ಯಾಂಪ್‌ನ ಶಂಭು ಸರ್ದಾರ್ (31) ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಸುಮಾರು 20 ಕೆಜಿ ತೂಕದ, ಅಂದಾಜು ₹20 ಲಕ್ಷ ಮೌಲ್ಯದ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಸೆಂಟ್ರಿಂಗ್ ಕೆಲಸಗಾರ ಹಾಗೂ ಕೂಲಿ ಕಾರ್ಮಿಕರಂತೆ ಬದುಕು ಸಾಗಿಸುತ್ತಿದ್ದ ಆರೋಪಿಗಳು, ಯಾರಿಗೂ ಅನುಮಾನ ಬಾರದಂತೆ ಬೈಕ್‌ನಲ್ಲಿ ಗಾಂಜಾ ಸಾಗಿಸಿ ಕ್ಯೂಆರ್ ಕೋಡ್ ಮೂಲಕ ಹಣ ಪಡೆದು ಗುಪ್ತವಾಗಿ ವ್ಯವಹಾರ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರು ಕಾಲೇಜು ವಿದ್ಯಾರ್ಥಿಗಳು, ಯುವಕರು ಹಾಗೂ ಕೂಲಿ ಕಾರ್ಮಿಕರನ್ನು ಗುರಿಯಾಗಿಸಿಕೊಂಡು ಗಾಂಜಾ ಮಾರಾಟ ಮಾಡುತ್ತಿದ್ದು, ರಾಯಚೂರು ಮಾತ್ರವಲ್ಲದೆ ಬಳ್ಳಾರಿ, ದಾವಣಗೆರೆ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಿಗೆ ಪೂರೈಕೆ ಮಾಡುತ್ತಿದ್ದರು ಎಂಬ ಮಾಹಿತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಬಳಗಾನೂರು ಠಾಣೆ ಪೊಲೀಸರು ಇಬ್ಬರನ್ನೂ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

