ಬೆಂಗಳೂರು: ಸರ್ಕಾರಿ ವಸತಿ ಯೋಜನೆಗಳಲ್ಲಿ ಹೊಸ ಹೊಸ ಆಕಾಂಕ್ಷೆ, ನವೀನ ಕಲ್ಪನೆ ಮತ್ತು ಪ್ರಸ್ತುತ ಎದುರಿಸುತ್ತಿರುವ ತೊಡಕುಗಳ ನಿವಾರಣೆಗಾಗಿ ‘ಕೈಗೆಟಕುವ ವಸತಿ ನೀತಿ’ ರಚಿಸಲು ಸರ್ಕಾರ ಮುಂದಾಗಿದೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆ ಹ್ಯೂಮನ್ ಸೆಟಲ್‌ಮೆಂಟ್ ಸಂಸ್ಥೆಗೆ ಹೊಸ ನೀತಿಯನ್ನು ಸಿದ್ಧಪಡಿಸುವ ಜವಾಬ್ದಾರಿ ನೀಡಿರುವ ವಸತಿ ಇಲಾಖೆ, ಮುಂದೆ ವರದಿ ಸಲ್ಲಿಕೆಯಾದ ಬಳಿಕ ಸಂಪುಟದ ಮುಂದಿಟ್ಟು ಚರ್ಚೆ ನಡೆಸಿ ಅನುಷ್ಠಾನಕ್ಕೆ ತರಲಿದೆ.
ವಸತಿ ಯೋಜನೆ ಅನುಷ್ಠಾನದಲ್ಲಿ ಅಡಿಗಡಿಗೂ ತೊಡಕುಗಳಿವೆ. ಕಾಲ ಬದಲಾದಂತೆ ಯೋಜನೆಗಳ ಸ್ವರೂಪ ಬದಲಿಸಬೇಕಾದ ಅನಿವಾರ್ಯತೆ ಇದೆ. ಜತೆಗೆ ಲಾನುಭವಿಗಳ ಅಗತ್ಯತೆ, ಸರ್ಕಾರದ ಇತಿಮಿತಿ ಎಲ್ಲವನ್ನೂ ಒಳಗೊಂಡಂತೆ ಕಾನೂನು, ನಿಯಮಗಳ ಬದಲಾವಣೆ ಆಗಬೇಕಾಗುತ್ತದೆ. ಈ ಕಾರಣಕ್ಕೆ ಈಗಿನ ಸಂದರ್ಭಕ್ಕೆ ಅನುಗುಣವಾಗಿ ನೀತಿ ಅಗತ್ಯವಿದೆ ಎಂಬುದು ವಸತಿ ಇಲಾಖೆ ಅಧಿಕಾರಿಗಳ ವಿವರಣೆಯಾಗಿದೆ.2016ರಲ್ಲಿ ಇಂತಹದ್ದೇ ಒಂದು ನೀತಿ ತರಲಾಗಿತ್ತು. ಅದು ಅಂದಿನ ಅಗತ್ಯತೆಗೆ ಅನುಕೂಲವಾಗುವಂತೆ ರೂಪಿಸಲಾಗಿತ್ತು. ಅಲ್ಲಿಂದೀಚೆಗೆ ವಾತಾವರಣದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಅರ್ಹ ಲಾನುಭವಿಗಳಿಗೆ ವಸತಿ ಯೋಜನೆಗಳು ಕೈಗೆಟುಕುತ್ತಿಲ್ಲ. ಸೂರಿನ ಅನಿವಾರ್ಯತೆ ಇದ್ದವರು ಖರ್ಚುವೆಚ್ಚ, ಮಾಡಬೇಕಾದ ಸಾಲದ ಪ್ರಮಾಣ ಗಮನಿಸಿ ಹಿಂದೇಟು ಹೊಡೆಯುವ ಉದಾಹರಣೆ ಲೆಕ್ಕವಿಲ್ಲದಷ್ಟಿದೆ. ಬ್ಯಾಂಕುಗಳು ಸಹ ಸಾಲ ಕೊಡಲು ಬ್ಯಾಂಕುಗಳು ಹಿಂದೇಟು ಹೊಡೆಯುತ್ತಿವೆ. ಈ ಕಾರಣಕ್ಕೆ ವಸತಿ ಯೋಜನೆಗಳ ಸ್ವರೂಪ ಬದಲಾಗಬೇಕಾಗಿದೆ, ಕಾನೂನು, ನಿಯಮಗಳಲ್ಲಿ ತಿದ್ದುಪಡಿ ಅನಿವಾರ್ಯತೆ ಇದೆ.
ಹಾಗೆಯೇ, ಕೇಂದ್ರ ಸರ್ಕಾರ ವಸತಿ ಯೋಜನೆಗಾಗಿ ರಾಜ್ಯ ಸರ್ಕಾರಗಳಿಂದ ನೀತಿಯನ್ನು ಅಪೇಕ್ಷಿಸುವ ಪರಿಪಾಠವಿದೆ. ಈ ಕಾರಣಕ್ಕೂ ಒಂದು ಪರಿಪಕ್ವ ಮತ್ತು ಈ ಸಂದರ್ಭಕ್ಕೆ ಹೊಂದುವಂತಹ ನೀತಿ ಅನಿವಾರ್ಯತೆ ಇತ್ತು.
ಆರ್ಥಿಕವಾಗಿ ಹಿಂದುಳಿದ ವಸತಿ ರಹಿಸರಿಗೆ ಸುಲಭ ಸರಳ ರೀತಿಯಲ್ಲಿ ಸೂರು ಸಿಗುವಂತಾಗಬೇಕು, ಗುಣಮಟ್ಟದ ಮನೆ ಲಭ್ಯವಾಗಬೇಕೆಂಬುದು ನೀತಿನ ಪ್ರಾಥಮಿಕ ಹಂತದ ತಳಹದಿಯಾಗಿರುತ್ತದೆ. ಮುಂದುವರಿದು, ವಸತಿ ಯೋಜನೆಯಲ್ಲಿ ವಿವಿಧ ಇಲಾಖೆಗಳು ಭಾಗಿಯಾಗುತ್ತವೆ. ಅಂದರೆ, ವಸತಿ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕಂದಾಯ, ನಗರಾಭಿವೃದ್ಧಿ ಇಲಾಖೆಗಳು ವಸತಿ ಯೋಜನೆ ಅನುಷ್ಠಾನದಲ್ಲಿ ವಿವಿಧ ರೀತಿಯ ಜವಾಬ್ದಾರಿ ಹೊಂದಿವೆ. ಈ ಇಲಾಖೆಗಳ ನಡುವೆ ಸಮನ್ವಯತೆ ಬೇಕಾಗುತ್ತದೆ. ಆ ಅಂಶವೂ ನೀತಿಯಲ್ಲಿರಲಿದೆ.
ಹಾಗೆಯೇ, ಈಗಿನ ಕಾಲಘಟ್ಟಕ್ಕೆ ಅಗತ್ಯವಾಗಿ ಕಾನೂನು ತಿದ್ದುಪಡಿ, ನಿಯಮ ಬದಲಾವಣೆಗೆ ಶಿಫಾರಸು ಸಹ ಇರಲಿದೆ.
ಖಾಸಗಿಯಲ್ಲೂ ‘ಮೀಸಲು’
ಖಾಸಗಿ ಬಡಾವಣೆ, ವಸತಿ ಸಮುಚ್ಚಯಗಳಲ್ಲಿ ಆರ್ಥಿಕವಾಗಿ ಹಿಂದುಳಿದ ವಸತಿ ರಹಿತರಿಗೆ ‘ಮೀಸಲು’ ಏಕೆ ಸಿಗುವಂತಾಗಬಾರದು ಎಂದು ಸರ್ಕಾರದ ಮಟ್ಟದಲ್ಲಿ ಚಿಂತನೆ ಮೊಳಕೆಯೊಡೆದಿದೆ. ಇದಿನ್ನೂ ತೀರಾ ಪ್ರಾಥಮಿಕ ಹಂತದಲ್ಲಿದ್ದು ಚರ್ಚೆ ನಡೆದು ಸ್ವರೂಪ ಪಡೆದುಕೊಳ್ಳಬಹುದು ಅಥವಾ ಈ ಹಂತದಲ್ಲೇ ತಿರಸ್ಕಾರಗೊಳ್ಳಲೂ ಬಹುದು ಎಂದು ವಸತಿ ಇಲಾಖೆ ಹಿರಿಯ ಅಧಿಕಾರಿ ವಿಜಯವಾಣಿಗೆ ತಿಳಿಸಿದರು.
ಪ್ರಸ್ತುತ ಖಾಸಗಿ ಬಡಾವಣೆಯಲ್ಲಿ ಸಾರ್ವಜನಿಕ ಉದ್ದೇಶಕ್ಕೆ ನಿವೇಶನ ಕಾಯ್ದಿರಿಸುವುದು ಮತ್ತು ಪಾರ್ಕ್‌ಗೆ ಜಾಗ ಮೀಸಲಿಡುವ ಪದ್ಧತಿ ಇದೆ. ಅದೇ ಮಾದರಿಯಲ್ಲಿ ಲೇಔಟ್ ಅಥವಾ ವಸತಿ ಸಮುಚ್ಛಯದಲ್ಲಿ ಒಂದು ಸಣ್ಣ ಪ್ರಮಾಣದಲ್ಲಿ ‘ವಸತಿ ರಹಿತ ಆರ್ಥಿಕವಾಗಿ ಹಿಂದುಳಿದವರಿಗೆ’ ಅವಕಾಶ ಕಲ್ಪಿಸಲು ಮೀಸಲು ವ್ಯವಸ್ಥೆ ಜಾರಿಗೆ ತರಬಹುದೆಂಬ ಅಭಿಪ್ರಾಯ ಬಂದಿದೆ ಎಂದು ವಿವರಿಸಿದರು.
ಅಸಲು ಲಾನುಭವಿಯದ್ದು, ಬಡ್ಡಿ ಸರ್ಕಾರದ್ದು!
ಸರ್ಕಾರದ ವಸತಿ ಯೋಜನೆಗಳಲ್ಲಿ ಲಾನುಭವಿ ತನ್ನ ಪಾಲಿನ ವಂತಿಕೆ ಕಟ್ಟಲಾಗದ ಸ್ಥಿತಿಯಲ್ಲಿ ಇರುವ ಪ್ರಕರಣ ಹೆಚ್ಚಿರುತ್ತಾರೆ. ಬ್ಯಾಂಕುಗಳು ಸಾಲ ಕೊಡಲು ಮುಂದೆ ಬಂದರೂ ಅದನ್ನು ತೀರಿಸಲು ಸಾಧ್ಯವಾಗದ ಪರಿಸ್ಥಿತಿ ಅರಿತು ಯೋಜನೆಯ ಲಾಭ ಪಡೆಯಲು ಅರ್ಹರು ಹಿಂದೇಟು ಹೊಡೆಯುತ್ತಾರೆ.
ಈ ಕಾರಣಕ್ಕೆ ವಸತಿ ಯೋಜನೆಗಳಲ್ಲಿ ಸಾಲದ ಬಡ್ಡಿಯನ್ನು ಸರ್ಕಾರ ಭರ್ತಿ ಮಾಡಿ, ಅಸಲನ್ನು ಮಾತ್ರ ಲಾನುಭವಿ ಪಾವತಿ ಮಾಡುವಂತೆ ಯೋಜನೆ ರೂಪಿಸಬಹುದು ಎಂದು ಖಾಸಗಿ ಸಂಸ್ಥೆ ಹಣಕಾಸು ಇಲಾಖೆಗೆ ಇತ್ತೀಚಿಗೆ ಸಲ್ಲಿಸಿದ ವರದಿಯಲ್ಲಿ ಪ್ರಸ್ತಾಪಿದೆ. ಈ ವಿಷಯ ಇನ್ನಷ್ಟು ಚರ್ಚೆಯಾಗಿ ಅದಕ್ಕೊಂದು ಸ್ಪಷ್ಟರೂಪ ಸಿಗಲು ಸಭೆಗಳು ನಡೆಯುವ ಸಾಧ್ಯತೆ ಇದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

