ಮಂಗಳೂರು: ಪರಿಶಿಷ್ಟ ಜಾತಿಯವರಿಗೆ ಒಳ ಮೀಸಲಾತಿ ಕಲ್ಪಿಸುವಾಗ ಮೊಗೇರರನ್ನು ನಾಲ್ಕನೇ ಗುಂಪಿನ ಬದಲು ಎರಡನೇ ಗುಂಪಿನಲ್ಲಿ ಸೇರಿಸಬೇಕು ಎಂದು ರಾಜ್ಯ ಮೊಗೇರರ ಸಂಘವು ಒತ್ತಾಯಿಸಿದೆ.
ಇಲ್ಲಿ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಸಂಘದ ಅಧ್ಯಕ್ಷ ನಂದರಾಜ್ ಸಂಕೇಶ್, ‘ಮೊಗೇರ ಜಾತಿಯು ದಕ್ಷಿಣ ಕನ್ನಡ- ಉಡುಪಿ ಜಿಲ್ಲೆಗಳಲ್ಲಿನ ಹೊಲೆಯ ಸಮುದಾಯದ ಉಪ ವಿಭಾಗ.
ಮೊಗೇರರು ಅಸ್ಪೃಶ್ಯತೆಯ ಪಿಡುಗಿನಿಂದ ಬಳಲುತ್ತಿರುವುದು ಕುಲಶಾಸ್ತ್ರೀಯ ಅಧ್ಯಯನದಲ್ಲೂ ಸಾಬೀತಾಗಿದೆ. ವೃತ್ತಿಯಲ್ಲಿ ಮೊಲ ಬೇಟೆಗಾರರಾಗಿರುವ ಮೊಗೇರರು ಸಾಮಾಜಿಕ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ. ಈ ಜಾತಿಯ ಯಾರೂ ಗಜೆಟೆಡ್ ಅಧಿಕಾರಿ, ವೈದ್ಯ, ಪ್ರಾಧ್ಯಾಪಕ, ಜಿಲ್ಲಾ ನ್ಯಾಯಾಧೀಶ, ಶಾಸಕ ಸಂಸದ, ಸಚಿವ, ಮಂಡಳಿ ಅಧ್ಯಕ್ಷ, ಪಾಲಿಕೆ ಸದಸ್ಯ, ತಾಲ್ಲೂಕು ಪಂಚಾಯಿತಿ ಸದಸ್ಯ, ಜಿಲ್ಲಾ ಪಂಚಾಯಿತಿ ಸದಸ್ಯರಾಗಿಲ್ಲ. ಪರಿಶಿಷ್ಟ ಜಾತಿಯ 101 ಜಾತಿಗಳಲ್ಲೇ ಅತೀ ಕೆಳಮಟ್ಟದಲ್ಲಿದೆ’ ಎಂದರು.
2011ರ ಜನಗಣತಿ ಪ್ರಕಾರ ರಾಜ್ಯದಾದ್ಯಂತ ಮೊಗೇರರ ಸಂಖ್ಯೆ 82,807. ಅದು ಈಗ 1.5 ಲಕ್ಷ ದಾಟಿದೆ. ಒಳಮೀಸಲಾತಿ ಕುರಿತು ಮಾಧುಸ್ವಾಮಿ ನೇತೃತ್ವದ ಸಮಿತಿ ರಚಿಸಿದ್ದ ಕರಡಿನಲ್ಲಿ ಅಲೆಮಾರಿ ಸಮುದಾಯಗಳನ್ನು ಒಳಗೊಂಡ ನಾಲ್ಕನೇ ಗುಂಪಿನಲ್ಲಿ ಮೊಗೇರರನ್ನು ತಪ್ಪಾಗಿ ಸೇರಿಸಲಾಗಿದೆ. ನಾವು ಅಲೆಮಾರಿಗಳಲ್ಲ. ಮೀಸಲಾತಿಯಲ್ಲಿ ಶೇ 1ರಷ್ಟು ಪಾಲನ್ನು ಮಾತ್ರ ಹೊಂದಿರುವ ನಾಲ್ಕನೇ ಗುಂಪಿನಲ್ಲಿ 89 ಜಾತಿಗಳಿವೆ. 1.5 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಮೊಗೇರರಿಗೆ ಇದರಿಂದ ಅನ್ಯಾಯವಾಗುತ್ತದೆ. ಹಾಗಾಗಿ ಶೇ 5.5ರಷ್ಟು ಮೀಸಲಾತಿ ಸೌಲಭ್ಯ ಇರುವ ಎರಡನೇ ಗುಂಪಿಗೆ ಮೊಗೇರರನ್ನು ಸೇರಿಸಬೇಕು. ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಒದಗಿಸಲು ಸರ್ಕಾರವು ರಚಿಸಿರುವ ನಿವೃತ್ತ ನ್ಯಾಯಮೂರ್ತಿ ಎಚ್.ಎನ್ ನಾಗಮೋಹನ್‌ದಾಸ್ ಆಯೋಗಕ್ಕೂ ಈ ಬಗ್ಗೆ ಮನವಿ ಸಲ್ಲಿಸಿದ್ದೇವೆ’ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘದ ನಿಕಟ ಪೂರ್ವ ಅಧ್ಯಕ್ಷ ಸುಂದರ ಮೇರ, ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ತುಳಸೀದಾಸ್ ಕೂಳೂರು, ಮುಖಂಡರಾದ ಅಶೋಕ್ ಕೊಂಚಾಡಿ, ಪುತ್ತೂರು ತಾಲ್ಲೂಕು ಘಟಕದ ಅಧ್ಯಕ್ಷ ಸುಂದರ ಕೇಪುಲು, ಸುಳ್ಯ ತಾಲ್ಲೂಕು ಘಟಕದ ಅಧ್ಯಕ್ಷ ಕರುಣಾಕರ ಪಲ್ಲತಡ್ಕ, ಸಂಘದ ಮಂಗಳೂರು ತಾಲ್ಲೂಕು ಅಧ್ಯಕ್ಷ ಸೀತಾರಾಮ್ ಕೊಂಚಾಡಿ, ಕಾರ್ಯದರ್ಶಿ ಗಿರಿಯಪ್ಪ ಎಸ್., ಪದಾಧಿಕಾರಿಗಳಾದ ಸದಾನಂದ ಉಳ್ಳಾಲ, ರತ್ನಾವತಿ ರಾಮ್ ಕುಳಾಯಿ, ಯುವ ವೇದಿಕೆಯ ಮುಖಂಡರಾದ ಹರೀಶ್ ಕಾಟಿಪಳ್ಳ, ಉಮೇಶ್ ವಾಮಂಜೂರು, ಗೋಪಾಲಕೃಷ್ಣ ಪುನರೂರು ಭಾಗವಹಿಸಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

