ವಿಶೇಷ ಚೇತನ ಯುವತಿಯ ಮೇಲೆ ಪಾತಕಿಯೊಬ್ಬ ಗಾಂಜಾ ಅಮಲಿನಲ್ಲಿ ಅತ್ಯಾಚಾರಕ್ಕೆ ಯತ್ನಿಸಿ ಸಿಕ್ಕಿಬಿದ್ದಿರುವ ಘಟನೆ ನಗರದಲ್ಲಿ ನಡೆದಿದೆ. ಸುದೈವವಶಾತ್ ಆರೋಪಿ ಸಂತ್ರಸ್ತೆಯ ತಾಯಿ ಕೈಲಿ ಸಿಕ್ಕಿಬಿದ್ದಿದ್ದು , ಸ್ಥಳೀಯರು ಗೂಸಾ ಕೊಟ್ಟು ಪೊಲೀಸರ ವಶಕ್ಕೆ ನೀಡಿದ್ದಾರೆ. ಬಂಧಿತ ಆರೋಪಿಯನ್ನು ವಿಘ್ನೇಶ್ ಎಂದು ಗುರುತಿಸಲಾಗಿದೆ. ಆಡುಗೋಡಿಯ ಎಂಆರ್ ನಗರದಲ್ಲಿ ಈ ಘಟನೆ ನಡೆದಿದೆ. ಸಂತ್ರಸ್ತ ಯುವತಿಯು ಬುದ್ದಿಮಾಂದ್ಯಳಾಗಿದ್ದು, ಆಕೆಗೆ ಕೈಕಾಲುಗಳು ಸ್ವಾಧೀನದಲ್ಲಿರಲಿಲ್ಲ. ಅಷ್ಟೇ ಅಲ್ಲದೇ ಆಕೆಯು ಮಾನಸಿಕವಾಗಿಯೂ ಬೆಳವಣಿಗೆ ಹೊಂದದೆ ಇನ್ನೂ ಮಗುವಿನಂತೆ ವರ್ತಿಸುತ್ತಿದ್ದಳು. ಮನೆಯವರು ಆಕೆಯನ್ನು ಮಗುವಿನಂತೆಯೇ ಪೋಷಿಸುತ್ತಿದ್ದರು. ಸಂತ್ರಸ್ತೆಯ ಮನೆಯವರು ಒಟ್ಟಾಗಿ ಮದುವೆ ಸಮಾರಂಭಕ್ಕೆ ಹೊರಟಿದ್ದರು. ಮನೆಯನ್ನು ಹೊರಗಿನಿಂದ ಚಿಲಕ ಹಾಕಿಕೊಂಡು ತೆರಳಿದ್ದ ವೇಳೆ ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಆರೋಪಿ ವಿಘ್ನೇಶ್ ಗಮನಿಸಿದ್ದ. ಎಲ್ಲರೂ ಹೋದ ಬಳಿಕ ಮನೆಯೊಳಗೆ ತೆರಳಿ ಮನೆಯನ್ನು ಒಳಗಿನಿಂದ ಚಿಲುಕ ಹಾಕಿಕೊಂಡಿದ್ದ. ಈ ವೇಳೆ ಅದೃಷ್ಟವಶಾತ್ ಯುವತಿಯ ತಾಯಿ ಮನೆಗೆ ಬಂದಿದ್ದರು. ಬಾಗಿಲು ಒಳಗಿನಿಂದ ಚಿಲಕ ಹಾಕಿರುವುದನ್ನು ಗಮನಿಸಿ ಒದ್ದು ಬಾಗಿಲನ್ನು ತೆರೆದಿದ್ದರು. ಈ ವೇಳೆ ಯುವತಿ ನಗ್ನ ಸ್ಥಿತಿಯಲ್ಲಿದ್ದರೆ, ಒಳ ಉಡುಪು ಧರಿಸಿ ಓಡಲು ಸಿದ್ದವಾಗಿದ್ದ ವಿಘ್ನೇಶ್ ಬಾಗಿಲ ಹಿಂದೆ ಅವಿತಿದ್ದು ಗೋಚರವಾಗಿತ್ತು. ಕೂಡಲೇ ಯುವತಿಯ ತಾಯಿ ಬೊಬ್ಬೆ ಹಾಕಿ ಸ್ಥಳೀಯರನ್ನು ಕರೆದಿದ್ದರು. ರೊಚ್ಚಿಗೆದ್ದ ಸ್ಥಳೀಯರು ಆತನನ್ನು ಹಿಡಿದು ಥಳಿಸಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

