ಕೊಪ್ಪಳ ಜಿಲ್ಲೆಯ ಕುಕುನೂರು ತಾಲೂಕಿನ ಪಾಲಕ್ಷಪ್ಪ ಎಂಬುವವರ ಕುಟುಂಬದಲ್ಲಿ ಜನಿಸಿದ ಶಿಶು. ಹೆರಿಗೆ ನಂತರ ಮಗುವಿನ ಹೊಟ್ಟೆಯ ಒಳಭಾಗದ ಕರಳುಗಳು ಸಂಪೂರ್ಣವಾಗಿ ಹೊರಗೆ ಬಂದ ಸ್ಥಿತಿಯಲ್ಲಿ ಮಗು ಜನಿಸಿದ್ದು, ಇದು ಅಪರೂಪದ ಹಾಗೂ ಅತಿ ಗಂಭೀರ ಜನನ ದೋಷವಾಗಿದೆ. ಕುಕುನೂರು ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ, ಹೆಚ್ಚಿನ ತಜ್ಞ ಚಿಕಿತ್ಸೆ ಇಲ್ಲಿ ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿ, ಮೊದಲು ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಅಲ್ಲಿ ಕೂಡ ಸೂಕ್ತ ಸೌಲಭ್ಯ ಕೊರತೆಯಿಂದ ತಕ್ಷಣವೇ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡುವಂತೆ ಸಲಹೆ ನೀಡಲಾಗಿದೆ. ಈ ವೇಳೆ ಮಗು ಮತ್ತು ತಾಯಿ ಇಬ್ಬರೂ ಅತಿ ಗಂಭೀರ ಸ್ಥಿತಿಯಲ್ಲಿದ್ದು, ಸಮಯವೇ ಜೀವವಾಗಿರುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಖಿಲ ಕರ್ನಾಟಕ ಆಂಬುಲೆನ್ಸ್ ಸಂಘದ ಸಹಕಾರದಿಂದ ಕೊಪ್ಪಳದಿಂದ ಹುಬ್ಬಳ್ಳಿಯವರೆಗೆ ಸುಮಾರು 30 ಆಂಬುಲೆನ್ಸ್‌ಗಳ ಸಹಾಯದಿಂದ ‘ಜೀರೋ ಟ್ರಾಫಿಕ್’ ವ್ಯವಸ್ಥೆ ಮಾಡಲಾಯಿತು. ಕುಕುನೂರು–ಕೊಪ್ಪಳ–ಬನ್ನಿಕೊಪ್ಪ–ಗದಗ್–ಹುಬ್ಬಳ್ಳಿ ಮಾರ್ಗದಲ್ಲಿ ಖಾಸಗಿ ಆಂಬುಲೆನ್ಸ್ ಚಾಲಕರು, ಸಂಘದ ಕಾರ್ಯಕರ್ತರು ಹಾಗೂ ಪೊಲೀಸ್ ಇಲಾಖೆ ಒಗ್ಗಟ್ಟಿನಿಂದ ಟ್ರಾಫಿಕ್ ಸಂಪೂರ್ಣವಾಗಿ ನಿಯಂತ್ರಿಸಿ, ಮಗುವನ್ನು ಸುರಕ್ಷಿತವಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾನವೀಯತೆ, ಸಂಘಟನೆ ಮತ್ತು ಸಮಯಪ್ರಜ್ಞೆಯಿಂದ ನಡೆದ ಈ ಕಾರ್ಯಾಚರಣೆ ಒಂದು ಅಮೂಲ್ಯ ಜೀವ ಉಳಿಸುವಲ್ಲಿ ನಿರ್ಣಾಯಕವಾಗಿದೆ. ಈ ಸೇವೆಗೆ ಆಂಬುಲೆನ್ಸ್ ಸಿಬ್ಬಂದಿ, ಚಾಲಕರು ಹಾಗೂ ಪೊಲೀಸ್ ಇಲಾಖೆ ಕಾರಣಿಕರ್ತರಾಗಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

