ಬಾಡಿಯಾಳ(ಸೈದಾಪುರ): ಶಾಲೆ ತಡೆಗೋಡೆಗೆ ಪಕ್ಕದಲ್ಲಿಯೇ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದನ್ನು ತಡೆಗಟ್ಟಬೇಕು ಎಂದು ಬಾಡಿಯಾಳ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಸಮೀಪದ ಬಾಡಿಯಾಳ ಗ್ರಾಮದ ಕೇಂದ್ರ ಬಿಂದಾಗಿರುವ ನಿಜಶರಣ ಅಂಬಿಗರ ಚೌಡಯ್ಯ ವೃತ್ತದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ತಡೆಗೋಡೆ ಪಕ್ಕದಲ್ಲಿರುವ ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಶಾಲಾ ಮುಂಭಾಗದ ಅಂಗಡಿಯಲ್ಲಿ ಬೆಳಿಗ್ಗೆಯಿಂದ ರಾತ್ರಿಯವರೆಗೂ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದರಿಂದ ಶಾಲೆಗೆ ಹೋಗಿ ಬರುವ ಮಕ್ಕಳ ಮೇಲೆ ದುಷ್ಪರಿಣಾಮ ಬಿರುತ್ತಿದೆ. ಶಾಲೆಗೆ ತೆರಳುವ ಶಿಕ್ಷಕರಿಗೂ ಕೂಡ ಮುಜುಗರ ಉಂಟಾಗುತ್ತಿದೆ. ಗ್ರಾಮದಲ್ಲಿ ಹಲವು ಅಂಗಡಿಗಳಲ್ಲಿ, ಅನಧಿಕೃತ ಸ್ಥಳಗಳಲ್ಲಿ ಮದ್ಯ ಸಿಗುತ್ತಿರುವುದರಿಂದ ಹಳ್ಳಿಯ ವಾತಾವರಣವೇ ಹಾಳಾಗಿದೆ. ಗ್ರಾಮದಲ್ಲಿರುವ ಮನೆಗಳಲ್ಲಿ ನಿತ್ಯ ಕುಟುಂಬಸ್ಥರೊಂದಿಗೆ ಜಗಳಗಳಾಗುತ್ತಿವೆ. ಜಿಲ್ಲಾಡಳಿತ ಅಕ್ರಮವಾಗಿ ಮದ್ಯ ಮಾರಾಟವನ್ನು ತಡೆಗಟ್ಟಿ ಬಡವರ ಬದುಕನ್ನು ಉಳಿಸಬೇಕು. ಅಕ್ರಮವಾಗಿ ಮದ್ಯ ಮಾರಾಟಗಾರರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ಗ್ರಾಮದ ಯುವ ಮುಖಂಡರಾದ ರವೀಂದ್ರ ಯಾಟಗಲ್, ಬನ್ನಪ್ಪ ಹಿರೇನೂರು, ಬಸವರಾಜ ಅಂಗಡಿ, ಮಹಾದೇವಪ್ಪ ಗಡದ, ಕರಣಯ್ಯಸ್ವಾಮಿ, ಬಸವರಾಜ ಹಿರ್ಜನ, ತಾಯಪ್ಪ ಚಂದಾಪುರ, ಬನ್ನಪ್ಪ ಕಾವಲಿ ಸೇರಿದಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

