ಪರಿಶಿಷ್ಟ ಜಾತಿಯ 14 ವರ್ಷದ ಬಾಲಕ ಮತ್ತು ಬಂಟ ಜಾತಿಯ ಬಾಲಕಿ ನಗರದ ಬಾಬುಗುಡ್ಡೆಯಲ್ಲಿ ರೈಲು ಹಳಿ ಮೇಲೆ ಕುಳಿತು ಮಾತನಾಡುತ್ತಿದ್ದ ವೇಳೆ ಅವರ ವಿಡಿಯೊ ಚಿತ್ರೀಕರಿಸಿ, ಬಾಲಕನ ಮೇಲೆ ಹಲ್ಲೆ ನಡೆಸಿದ ಕುರಿತು ನಗರ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಪ್ರಕರಣದ ಆರೋಪಿಗಳಾದ ಸ್ಟೀವನ್ ಮೊಂತೆರೊ ಹಾಗೂ ಆತನ ಮಗ ಅವಿಲ್ ಮೊಂತೆರೊ ಅವರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ. ‘ಹುಡುಗ ಮತ್ತು ಹುಡುಗಿ ಬಾಬುಗೆಡ್ಡೆಯ ಗ್ರಾಮ ಸಂಘದ ಬಳಿಯ ರೈಲು ಹಳಿಯಲ್ಲಿ ಸೋಮವಾರ ಸಂಜೆ ಜೊತೆಯಲ್ಲಿ ಕುಳಿತು ಮಾತನಾಡುತ್ತಿದ್ದರು. ಆಗ ಅಲ್ಲಿಗೆ ಹೋಗಿದ್ದ ಆರೋಪಿಗಳಾದ ಸ್ಟೀವನ್ ಮೊಂತೆರೊ ಹಾಗೂ ಅವಿಲ್ ಮೊಂತೆರೊ, ಹುಡುಗ ಹುಡುಗಿ ಜೊತೆಯಲ್ಲಿದ್ದ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದರು. ಆ ವಿಡಿಯೊವನ್ನು ಫೇಸ್‌ಬುಕ್‌ನಲ್ಲಿ ಪ್ರಕಟಿಸುವುದಾಗಿ ಬೆದರಿಸಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ. ‘ಆರೋಪಿಗಳು ಸ್ಥಳಕ್ಕೆ ಬರುತ್ತಿದ್ದಂತೆಯೇ ಹುಡುಗಿ ಅಲ್ಲಿಂದ ನಿರ್ಗಮಿಸಿದ್ದಳು. ಬಳಿಕ ಹುಡುಗನನ್ನು ರೈಲ್ವೆ ಹಳಿ ಪಕ್ಕದ ರಸ್ತೆಗೆ ಎಳೆದುಕೊಂಡು ಹೋಗಿ ತಂದೆ ಮಗ ಇಬ್ಬರು ಸೇರಿ ಹಲ್ಲೆ ನಡೆಸಿದ್ದರು. ಇನ್ನೊಮ್ಮೆ ಈ ಕಡೆಗೆ ಬಂದರೆ ನಿನ್ನ ಕೈಕಾಲು ಮುರಿಯುತ್ತೇವೆ ಎಂದು ಬೆದರಿಕೆ ಹಾಕಿದ್ದರು. ಈ ಬಗ್ಗೆ ಹಲ್ಲೆಗೊಳಗಾದ ಹುಡುಗನ ತಂದೆ ನಗರದ ದಕ್ಷಿಣ ಠಾಣೆಗೆ ದೂರು ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

