ಮಂಡ್ಯ : ಸಂಗೊಳ್ಳಿ ರಾಯಣ್ಣ ಟಿಶರ್ಟ್ ಧರಿಸಿದ್ದಕ್ಕೆ ಯುವಕನೊಬ್ಬನಿಗೆ ದುಷ್ಕರ್ಮಿಗಳು ಚಾಕುವಿನಿಂದ ಇರಿದಿರುವ ಘಟನೆ ಗುರುವಾರ ರಾತ್ರಿ ಮದ್ದೂರಿನಲ್ಲಿ ನಡೆದಿದೆ. ಯುವಕ ಮೋಹನ್ (21) ತೀವ್ರವಾಗಿ ಅಸ್ವಸ್ಥಗೊಂಡಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮದ್ದೂರು ತಾಲೂಕಿನ ಆಲೂರಿನಲ್ಲಿ ಬೀರೇಶ್ವರ ಸ್ವಾಮಿ ದೇವಸ್ಥಾನದ ಕುಂಭಾಭಿಷೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಬೀರೇಶ್ವರ ಗೆಳೆಯರ ಬಳಗ ಎಂಬ ಸಂಘಟನೆಯಿಂದ ಸದಸ್ಯರು ಸಾಮೂಹಿಕವಾಗಿ ಸಂಗೊಳ್ಳಿ ರಾಯಣ್ಣನ ಟಿ ಶರ್ಟ್ ಧರಿಸಿದ್ದರು. ಕೆಎಂ ದೊಡ್ಡಿಯ ಮೋಹನ್ ಕೂಡ ಈ ಗುಂಪಿನಲ್ಲಿದ್ದ. ರಾತ್ರಿ ಉತ್ಸವ ನಡೆಯುವ ವೇಳೆ ಕೆಲವು ದುಷ್ಕರ್ಮಿಗಳು ಮೋಹನ್ ನನ್ನು ದೇಗುಲದ ಹಿಂಭಾಗಕ್ಕೆ ಕರೆದೊಯ್ದು ಈ ದುಷ್ಕೃತ್ಯ ನಡೆಸಿದ್ದಾರೆ ಎನ್ನಲಾಗಿದೆ. ಗಾಯಗೊಂಡು ರಕ್ತದ ಮಡುವಿನಲ್ಲಿದ್ದ ಮೋಹನ್ ನನ್ನು ಕೂಡಲೇ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಶುಕ್ರವಾರ ಮೋಹನ್ ನನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಿದ್ದು ಆತನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಸ್ಥಳೀಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಯಲ್ಲಿ ತೊಡಗಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

