ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲೂಕಿನ ಕೊಳಗಿ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದ್ದ ರುಂಡವಿಲ್ಲದ ವೃದ್ಧೆಯ ಭೀಕರ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ನಿವಾಸಿ ಮನ್ಮನೆಯ ಕೃಷ್ಣಪ್ಪ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಫೆಬ್ರವರಿ 20 ರಂದು ಕೊಳಗಿ ಅರಣ್ಯದಲ್ಲಿ ಬೆತ್ತಲಾಗಿ ಬಿದ್ದ ಸ್ಥಿತಿಯಲ್ಲಿ ವೃದ್ಧೆಯ ಶವ ಪತ್ತೆಯಾಗಿತ್ತು. ಮಹಿಳೆಯನ್ನು ಅತ್ಯಾಚಾರ ಮಾಡಿ ನಂತರ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿತ್ತು. ಗೋಕರ್ಣ ಸಿಪಿಐ ಶ್ರೀಧರ್ ನೇತೃತ್ವದ ತಂಡ ವಿಶೇಷ ತನಿಖೆ ನಡೆಸಿತ್ತು. ಮೃತರನ್ನು ಮುಂಡಗೋಡು ತಾಲೂಕಿನ ಮಳಿಗೆಯಲ್ಲಿ ಕಿರಾಣಿ ಅಂಗಡಿ ನಡೆಸುತ್ತಿದ್ದ ಶಿವಕ್ಕ ಸೋಮಣ್ಣ ಗೌಡ ಪಾಟೀಲ್ (80) ಎಂದು ಗುರುತಿಸಲಾಗಿತ್ತು. ಆರೋಪಿಯು ವೃದ್ಧೆಯ ಬಳಿಯಿದ್ದ ಚಿನ್ನಾಭರಣಗಳನ್ನು ದೋಚಲು ಹತ್ಯೆ ನಡೆಸಿದ್ದಾಗಿ ಒಪ್ಪಿಕೊಂಡಿದ್ದಾನೆ. ಗುರುತು ಸಿಗಬಾರದೆಂದು ರುಂಡ ಕತ್ತರಿಸಿ ಬೇರೆಡೆ ಎಸೆದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಆರೋಪಿಯ ವಿರುದ್ಧ ಈಗಾಗಲೇ ಮತ್ತೊಂದು ಕೊಲೆ ಪ್ರಕರಣವೂ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

