ವಸತಿ ಶಾಲೆಯಲ್ಲಿ ಶನಿವಾರ ಸಹಪಾಠಿಗಳ ಮೇಲೆ ತೀವ್ರ ಹಲ್ಲೆ ನಡೆಸಿ, ಒಬ್ಬನ ಕೊಂದಿದ್ದ ಕಾನೂನು ಸಂಘರ್ಷಕ್ಕೊಳಗಾದ ಬಾಲಕ ತೀವ್ರ ಕೀಟಲೆಗೆ ಗುರಿಯಾಗಿದ್ದ ಎನ್ನಲಾಗಿದೆ. ಆಪ್ತ ಸಮಾಲೋಚನೆ ವೇಳೆ ಬಾಲಕ ಈ ವಿಷಯವನ್ನು ವಿಚಾರಣಾ ತಂಡಕ್ಕೆ ತಿಳಿಸಿದ್ದಾನೆ. ಇಡೀ ಹಾಸ್ಟೆಲ್‌ನಲ್ಲಿ ಎಲ್ಲರೂ ಆಂಧ್ರಪ್ರದೇಶದವರಾಗಿದ್ದರೂ, ಈತನೊಬ್ಬನೇ ಕರ್ನಾಟಕದವನಾಗಿದ್ದ. ಆಟಪಾಠಗಳಲ್ಲಿ ಆತನನ್ನು ಯಾರೂ ಸೇರಿಸಿಕೊಳ್ಳುತ್ತಿರಲಿಲ್ಲ. ಕ್ರಿಕೆಟ್ ಆಡುವಾಗ ‘ಆರ್‌ಸಿಬಿ’ ಎಂದು ರೇಗಿಸುತ್ತಿದ್ದರು ಎಂದು ಹೇಳಿಕೊಂಡಿರುವುದಾಗಿ ಗೊತ್ತಾಗಿದೆ. ಹಲ್ಲೆ ನಡೆದ ರಾತ್ರಿಯು ಕಾನೂನು ಸಂಘರ್ಷಕ್ಕೆ ಒಳಗಾಗಿರುವ ಬಾಲಕನನ್ನು ಕೀಟಲೆ ಮಾಡಲು ಸಹಪಾಠಿಗಳು ಮಾತನಾಡಿಕೊಳ್ಳುತ್ತಿದ್ದರು ಎನ್ನಲಾಗಿದೆ. ಇದೆಲ್ಲದರಿಂದ ಬೇಸರಗೊಂಡ ಬಾಲಕ ಎಲ್ಲರ ಮೇಲೆ ತೀವ್ರ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾನೂನು ಸಂಘರ್ಷಕ್ಕೆ ಒಳಗಾಗಿರುವ ಬಾಲಕನನ್ನು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಿ, ಸರ್ಕಾರಿ ಬಾಲಮಂದಿರದಲ್ಲಿ ಇರಿಸಲಾಗಿದೆ. ಮಂಗಳವಾರ ವಿಚಾರಣೆಗಾಗಿ ಸುಪರ್ದಿಗೆ ಪಡೆದು, ಮತ್ತೆ ಬಾಲಮಂದಿರಕ್ಕೆ ಕಳುಹಿಸಲಾಗಿದೆ. ಬುಧವಾರ ಸ್ಥಳ ಮಹಜರು ನಡೆಸಲು ಕರೆತರಲಾಗುತ್ತದೆ ಎಂದು ಗೊತ್ತಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

