ಪೆಟ್ರೋಲ್ ಸಂಗ್ರಹ ಮಾಡಿದ್ದ ಮನೆಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಗೃಹಿಣಿ ತೀವ್ರವಾಗಿ ಗಾಯಗೊಂಡ ಘಟನೆ ತಾಲೂಕಿನ ತಡಕೋಡ ಗ್ರಾಮದ ಹರಿಜನಕೇರಿ ಓಣಿಯಲ್ಲಿ ಸೋಮವಾರ ರಾತ್ರಿ ನಡೆದಿದೆ. ಪೂರ್ಣಿಮಾ ಕಲ್ಲಪ್ಪ ಹಾದಿಮನಿ(32) ತೀವ್ರವಾಗಿ ಗಾಯಗೊಂಡಿದ್ದು, ಶೇ.80 ರಷ್ಟು ದೇಹ ಸುಟ್ಟಿರುವ ಕಾರಣ ಸ್ಥಿತಿ ಚಿಂತಾಜನಕವಾಗಿದೆ. ಗ್ರಾಮದಿಂದ ಜಿಲ್ಲಾಸ್ಪತ್ರೆಗೆ ಕರೆ ತಂದು ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಕಿಮ್ಸ್ ಗೆ ರವಾನಿಸಲಾಗಿದೆ. ಪೆಟ್ರೋಲ್ ಅಭಾವ ಹಿನ್ನಲೆಯಲ್ಲಿ ಪೆಟ್ರೋಲ್ ಕ್ಯಾನ್ ನಲ್ಲಿ ಸಂಗ್ರಹಿಸಿ, ಮನೆಯಲ್ಲಿ ಪ್ರಿಡ್ಜ ಬಳಿ ಇಡಲಾಗಿತ್ತು. ಪೂರ್ಣಿಮಾ ಅಡುಗೆ ಮನೆಯಲ್ಲಿದ್ದಾಗ ಏಕಾಏಕಿ ಕ್ಯಾನ್ ಗೆ ಬೆಂಕಿ ಹೊತ್ತಿಕೊಂಡು ಇದು ಸ್ಪೋಟಗೊಂಡಿದ್ದು, ಇಡೀ ಮನೆಗೆ ಬೆಂಕಿ ಆವರಿಸಿದೆ. ಅಡುಗೆ ಮನೆಯಲ್ಲಿ ಸಿಲುಕಿದ್ದ ಅತ್ತಿಗೆಯನ್ನು ಮೈದುನ ಯಲ್ಲಪ್ಪ ಕಾಪಾಡಿದ್ದು, ಈ ವೇಳೆ ಅವನಿಗೂ ಗಾಯಗಳಾಗಿವೆ. ಆದರೆ ಮಹಿಳೆಯ ಸ್ಥಿತಿ ಮಾತ್ರ ಗಂಭೀರವಾಗಿದೆ. ಈ ವೇಳೆ ಮನೆಯ ಸದಸ್ಯರ ಹೊರಗಡೆ ಕುಳಿತಿದ್ದರಿಂದ ಪಾರಾಗಿದ್ದಾರೆ. ಅಗ್ನಿ ಶಾಮಕದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಬೆಂಕಿ ನಂದಿಸುವ ಕೆಲಸ ಮಾಡಿಸಿದ್ದಾರೆ. ಗರಗ ಪೊಲೀಸ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

