ಚಿತ್ರದುರ್ಗ: ಸರ್ಕಾರ ಬಡವರಿಗಾಗಿ ರೂಪಿಸಿರುವ ಸಹಾಯಧನ ಹಾಗೂ ಸಾಲ ಸೌಲಭ್ಯದ ಸ್ಕೀಂಗಳನ್ನು ಜಾರಿ ಮಾಡುವಲ್ಲಿ ನಿರ್ಲಕ್ಷ್ಯ ತೋರುವ ಬ್ಯಾಂಕುಗಳ ಕಾರ್ಯವೈಖರಿಗೆ ಸಂಸದ ಗೋವಿಂದ ಎಂ ಕಾರಜೋಳ ಅಸಮಾಧಾನ ವ್ಯಕ್ತಪಡಿಸಿದರು. ಇದೇ ಪರಿಸ್ಥಿತಿ ಮುಂದುವರೆದರೆ ಸಂಬಂಧಪಟ್ಟ ಬ್ಯಾಂಕ್ ವ್ಯವಸ್ಥಾಪಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೇಂದ್ರ ಹಣಕಾಸು ಸಚಿವರಿಗೆ ಪತ್ರ ಬರೆಯುವುದಾಗಿ ಅವರು ಎಚ್ಚರಿಸಿದರು.
ನಗರದ ಜಿ.ಪಂ. ಸಭಾಂಗಣದಲ್ಲಿ ಇಂದು ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ನೇತೃತ್ವದಲ್ಲಿ ಜರುಗಿದ ಸಲಹಾ ಸಮಿತಿ ಹಾಗೂ ಪರಿಶೀಲನಾ ಸಮಿತಿ ಸಭೆಯಲ್ಲಿ ಮಾತನಾಡಿದರು.
ಕೃಷಿ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ, ಶಿಕ್ಷಣ, ಮನೆ ನಿರ್ಮಾಣ ಸೇರಿದಂತೆ ಸರ್ಕಾರಿ ಪ್ರಾಯೋಜಿತ ಯಾವುದೇ ಸ್ಕೀಂಗಳಲ್ಲಿ ನಿಗದಿಗೊಳಿಸಿದ ಗುರಿಗಳನ್ನು ಬ್ಯಾಂಕುಗಳು ಸಾಧಿಸಿಲ್ಲ. ಬಡವರ ಕೆಲಸ ಮಾಡಲು ಬ್ಯಾಂಕ್ ಅಧಿಕಾರಿಗಳಿಗೆ ಯಾಕಿಷ್ಟು ತಾತ್ಸರ? ಎಂದು ಪ್ರಶ್ನಿಸಿದ ಸಂಸದರು, ರೈತರ ಬಗ್ಗೆ ಬ್ಯಾಂಕ್ ಅಧಿಕಾರಿಗಳಿಗೆ ಕಾಳಜಿ ಇಲ್ಲ, ನಬಾರ್ಡ್‍ನಿಂದ ಕುರಿಗಾಹಿಗಳಿಗೆ ಸಾಲ ಸೌಲಭ್ಯ ನೀಡಲಾಗುತ್ತದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಕೃಷಿ ಹೊರತುಪಡಿಸಿ, ಕುರಿ ಸಾಕಣಿಕೆ ಪ್ರಧಾನ ವೃತ್ತಿಯಾಗಿದೆ. ಆದರೆ ಬ್ಯಾಂಕುಗಳು ಇದುವರೆಗೂ ಕುರಿಗಾಹಿಗಳಿಗೆ ಸಾಲ ಸೌಲಭ್ಯ ನೀಡಿಲ್ಲ. ಬಡವರಿಗೆ ಸಾಲ ನೀಡಲು ಆಧಾರ ಕೇಳುವ ಬ್ಯಾಂಕುಗಳು, ಯಾವುದೇ ಆಧಾರ ಇಲ್ಲದೆ ಸಾವಿರಾರು ಕೋಟಿ ಸಾಲವನ್ನು ಉದ್ಯಮಿಗಳಿಗೆ ನೀಡುತ್ತವೆ ಎಂದು ಸಂಸದ ಗೋವಿಂದ ಎಂ ಕಾರಜೋಳ ಅಸಮಧಾನ ಹೊರ ಹಾಕಿದರು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಕುಮಾರ್, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿ.ಪಂ. ಸಿಇಓ ಎಸ್.ಜೆ.ಸೋಮಶೇಖರ್, ಆರ್.ಬಿ.ಐ. ಪ್ರಬಂಧಕ ಅರುಣ್ ಕುಮಾರ್, ನಬಾರ್ಡ್ ಜಿಲ್ಲಾ ವ್ಯವಸ್ಥಾಪಕಿ ಕವಿತಾ ಸೇರಿದಂತೆ ವಿವಿಧ ಬ್ಯಾಂಕ್‍ಗಳ ಅಧಿಕಾರಿಗಳು ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





