ಹಣ ನೀಡಲು ನಿರಾಕರಿಸಿದ ಕಾರಣಕ್ಕೆ ಯುವಕರ ತಂಡವೊಂದು ಮಂಗಳಮುಖಿಯರ ಮೇಲೆ ತಲ್ವಾರ್ ಮತ್ತು ಚಾಕುವಿನಿಂದ ಭೀಕರವಾಗಿ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ಮೈಸೂರಿನ ಸಾತಗಳ್ಳಿ ಸಮೀಪದ ಅಮೃತ ಬಡಾವಣೆಯಲ್ಲಿ ನಡೆದಿದೆ. ಅಮೃತ ಬಡಾವಣೆ ನಿವಾಸಿಯಾದ ಆನಮ್ ಎಂಬ ಮಂಗಳಮುಖಿಯ ಬಳಿ ಕೆಲವು ಯುವಕರು ತಮ್ಮ ವೈಯಕ್ತಿಕ ಖರ್ಚಿಗೆ ಹಣ ನೀಡುವಂತೆ ಒತ್ತಾಯಿಸಿದ್ದಾರೆ. ಆನಮ್ ಹಣ ನೀಡಲು ನಿರಾಕರಿಸಿದಾಗ ಯುವಕರು ಗಲಾಟೆ ಆರಂಭಿಸಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರುವುದನ್ನು ಕಂಡು ಆನಮ್ ತನ್ನ ಸ್ನೇಹಿತೆ ಪಾರಿ ಎಂಬಾಕೆಗೆ ಕರೆ ಮಾಡಿ ಸ್ಥಳಕ್ಕೆ ಬರಲು ತಿಳಿಸಿದ್ದಾಳೆ. ಗೌಸಿಯಾನಗರದ ನಿವಾಸಿಯಾದ ಪಾರಿ ಸ್ಥಳಕ್ಕೆ ಬರುತ್ತಿದ್ದಂತೆಯೇ, ಆಕ್ರೋಶಗೊಂಡಿದ್ದ ಯುವಕರು ತಲ್ವಾರ್ ಮತ್ತು ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ಈ ವೇಳೆ ಪಾರಿ ಅವರ ಮುಖಕ್ಕೆ ಚಾಕುವಿನಿಂದ ಇರಿದು ತೀವ್ರವಾಗಿ ಗಾಯಗೊಳಿಸಲಾಗಿದೆ. ಸದ್ಯ ಗಾಯಾಳು ಪಾರಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರೂ ಮಂಗಳಮುಖಿಯರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಭಾನುವಾರ ರಾತ್ರಿ ನಡೆದಿರುವ ಈ ಘಟನೆಗೆ ಸಂಬಂಧಿಸಿದಂತೆ ಮೈಸೂರಿನ ದಕ್ಷಿಣ (ಸೌತ್) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆ ನಡೆಸಿ ತಲೆಮರೆಸಿಕೊಂಡಿರುವ ಕಿಡಿಗೇಡಿ ಯುವಕರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

