ದಿನದ ಬಡ್ಡಿ ವ್ಯವಹಾರದಲ್ಲಿ ಪೊಲೀಸರೇ ಭಾಗಿ..? ಕೆಡಿಪಿ ಸಭೆಯಲ್ಲಿ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಶಾಸಕ ವಿನಯ್ ಕುಲಕರ್ಣಿ
ದಿನಬಡ್ಡಿ ಜಾಲಕ್ಕೆ ಪೊಲೀಸ್ ಬೆಂಬಲ ಆರೋಪ: ಕೆಡಿಪಿಯಲ್ಲಿ ವಿನಯ್ ಕುಲಕರ್ಣಿ ಬಾಂಬ್
ಧಾರವಾಡ: ಜಿಲ್ಲೆಯ ಕೆಡಿಪಿ ಸಭೆ ಈ ಬಾರಿ ಭಾರೀ ಸಂಚಲನಕ್ಕೆ ಕಾರಣವಾಗಿದೆ. ಧಾರವಾಡ ಹೊರವಲಯದ ಡೊಂಬರಕೊಪ್ಪ ಐಬಿಯಲ್ಲಿ ಶಾಸಕ ವಿನಯ್ ಕುಲಕರ್ಣಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಪೊಲೀಸರ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದವು…
ಸಭೆಯಲ್ಲಿ ಮಾತನಾಡಿದ ಶಾಸಕ ವಿನಯ್ ಕುಲಕರ್ಣಿ, ಗ್ರಾಮೀಣ ಭಾಗಗಳಲ್ಲಿ ಅಕ್ರಮ ಚಟುವಟಿಕೆಗಳು ಹೆಚ್ಚುತ್ತಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಇಸ್ಪೀಟ್, ಗಾಂಜಾ, ಹಾಗೂ ಬೆಟ್ಟಿಂಗ್ ದಂಧೆಗಳು ನಿರ್ಬಂಧವಿಲ್ಲದೆ ನಡೆಯುತ್ತಿರುವುದನ್ನು ಪ್ರಶ್ನಿಸಿದ ಅವರು, ತಕ್ಷಣವೇ ಇವುಗಳನ್ನು ನಿಯಂತ್ರಣಕ್ಕೆ ತರಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು…
ಇದಕ್ಕೂ ಮೀರಿಸಿ, ಕೆಲ ಪೊಲೀಸ್ ಸಿಬ್ಬಂದಿಗಳೇ ಈ ಅಕ್ರಮ ಚಟುವಟಿಕೆಗಳಿಗೆ ಹಣಕಾಸು ನೆರವು ನೀಡುತ್ತಿದ್ದಾರೆ ಎಂಬ ಸ್ಫೋಟಕ ಆರೋಪವನ್ನು ಮಾಡಿದ್ದಾರೆ. ದಿನದ ಬಡ್ಡಿ ವ್ಯವಹಾರದಲ್ಲೂ ಪೊಲೀಸರೇ ಭಾಗಿಯಾಗಿದ್ದಾರೆ ಎಂದು ಆರೋಪಿಸಿ, ಪೊಲೀಸ್ ಇಲಾಖೆಯ ಕಾರ್ಯಪದ್ಧತಿಗೆ ತೀವ್ರ ತರಾಟೆಗೆ ತೆಗೆದುಕೊಂಡರು…
ಐಪಿಎಲ್ ಆರಂಭವಾಗಿರುವ ಹಿನ್ನೆಲೆ ಯುವಕರು ಬೆಟ್ಟಿಂಗ್ ದಂಧೆಯತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ ಎಂದು ಎಚ್ಚರಿಸಿದ ಅವರು, ಇಂತಹ ಕೃತ್ಯಗಳನ್ನು ತಡೆಯಲು ವಿಶೇಷ ಕಾರ್ಯಾಚರಣೆ ಕೈಗೊಳ್ಳಬೇಕು ಎಂದು ಸೂಚಿಸಿದರು…
ಸಭೆಯಲ್ಲಿ ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾದ ಪೊಲೀಸ್ ಸಿಬ್ಬಂದಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ. ಈ ಹೇಳಿಕೆಗಳಿಂದ ಸಭೆಯಲ್ಲಿ ಕ್ಷಣಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾದುದು ಗಮನಾರ್ಹವಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

