ಹುಬ್ಬಳ್ಳಿ: ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿ ವಿದ್ಯಾನಗರ ಪೊಲೀಸರು ಜಿಮ್ ಟ್ರೇನರ್ ವಿಜಯನಗರದ ಸಮೀರ್ ಮುಲ್ಲಾ ಎಂಬಾತನನ್ನು ಶನಿವಾರ ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಸಮೀರ್ ಜಿಮ್ ತರಬೇತಿ ನೆಪದಲ್ಲಿ ಯುವತಿಯನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ನಶೆ ಬರುವ ಪದಾರ್ಥ ಸೇರಿಸಿ ಜ್ಯೂಸ್ ಕುಡಿಸಿದ್ದ. ನಂತರ ಖಾಸಗಿ ಫೋಟೋ ಮತ್ತು ವಿಡಿಯೋ ಮಾಡಿ, ಅದನ್ನು ಎಲ್ಲರಿಗೂ ಹರಿಬಿಡುವುದಾಗಿ ಹೆದರಿಸಿ ಒತ್ತಾಯಪೂರ್ವಕವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದ ಎಂದು ನಗರದ ಸಂತ್ರಸ್ತೆಯು ವಿದ್ಯಾನಗರ ಠಾಣೆಯಲ್ಲಿ ದೂರು ಕೊಟ್ಟಿದ್ದರು. ಇದನ್ನಾಧರಿಸಿ ಪೊಲೀಸರು ಶನಿವಾರ ಸಮೀರ್‌ನನ್ನು ಬಂಧಿಸಿದ್ದಾರೆ. ಸಂತ್ರಸ್ತೆಯನ್ನು ಪೊಲೀಸರು ಶನಿವಾರ ಕೆಎಂಸಿಆರ್‌ಐ ಆಸ್ಪತ್ರೆಯ ನಿರ್ಭಯ ವಿಶೇಷ ವಾರ್ಡ್‌ನಲ್ಲಿ ವೈದ್ಯಕೀಯ ಪರೀಕ್ಷೆಗೊಳಪಡಿಸಿ, ತಜ್ಞ ವೈದ್ಯರಿಂದ ಕೌನ್ಸೆಲಿಂಗ್ ಸಹ ಮಾಡಿಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಡಿಸಿಪಿ ಶ್ರುತಿ ಎನ್.ಎಸ್. ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

