ಚಿತ್ರದುರ್ಗ/ಚಳ್ಳಕೆರೆ: ಗುರು-ಶಿಷ್ಯರ ಪವಿತ್ರ ಸಂಬಂಧಕ್ಕೆ ಕಪ್ಪುಚುಕ್ಕೆ ಹಚ್ಚುವಂತಹ ಘಟನೆಯೊಂದು ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ತಳಕು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವಿದ್ಯಾರ್ಥಿನಿಗೆ ವಿದ್ಯಾಬುದ್ಧಿ ಕಲಿಸಬೇಕಾದ ಗಣಿತ ಶಿಕ್ಷಕನೇ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಗರ್ಭಪಾತ ಮಾಡಿಸಿರುವ ಅಮಾನವೀಯ ಕೃತ್ಯ ಬೆಳಕಿಗೆ ಬಂದಿದೆ.16 ವರ್ಷದ ಬಾಲಕಿ ಮೇಲೆ ಶಿಕ್ಷಕ ಈ ಕೃತ್ಯ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ತಳಕು ಪೊಲೀಸ್ ಠಾಣಾ ವ್ಯಾಪ್ತಿಯ ಸರ್ಕಾರಿ ಶಾಲೆಯೊಂದರಲ್ಲಿ ಗಣಿತ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದ ಹೆಚ್.ಓ. ರಾಜಣ್ಣ ಎಂಬಾತನೇ ಈ ಕೃತ್ಯವೆಸಗಿದ ಆರೋಪಿ. ಈತ ಅದೇ ಶಾಲೆಯ ಅಪ್ರಾಪ್ತ ವಿದ್ಯಾರ್ಥಿನಿಯ ಮೇಲೆ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದ ಎನ್ನಲಾಗಿದೆ. ಶಿಕ್ಷಕನ ಕಾಮಕೃತ್ಯದಿಂದಾಗಿ ವಿದ್ಯಾರ್ಥಿನಿ ಗರ್ಭಿಣಿಯಾಗಿದ್ದಾಳೆ. ವಿಷಯ ಹೊರಬಂದರೆ ತನ್ನ ಬಣ್ಣ ಬಯಲಾಗುತ್ತದೆ ಎಂದು ಹೆದರಿದ ಶಿಕ್ಷಕ ರಾಜಣ್ಣ, ಯಾರಿಗೂ ತಿಳಿಯದಂತೆ ವಿದ್ಯಾರ್ಥಿನಿಗೆ ಮಾತ್ರೆ ನೀಡಿ ಗರ್ಭಪಾತ ಮಾಡಿಸಿದ್ದಾನೆ ಎಂದು ಆರೋಪಿಸಲಾಗಿದೆ. ಬಾಲಕಿಯ ಆರೋಗ್ಯದಲ್ಲಿ ಏರುಪೇರಾದಾಗ ಈ ವಿಷಯ ಪೋಷಕರಿಗೆ ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತ ಬಾಲಕಿಯ ಪೋಷಕರು ನೀಡಿದ ದೂರಿನ ಮೇರೆಗೆ ತಳಕು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.: ಆರೋಪಿ ಶಿಕ್ಷಕನ ವಿರುದ್ಧ ಪೋಕ್ಸೋ (POCSO) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ವಿದ್ಯೆ ಕಲಿಸಬೇಕಾದ ಶಿಕ್ಷಕನೇ ಇಂತಹ ಹೀನ ಕೃತ್ಯ ಎಸಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು, ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news
