ಬೆಳಗಾವಿ: ಈಜಲು ಹೋಗಿದ್ದ ಇಬ್ಬರು ಬಾಲಕರು ದುರ್ಮರಣ ಹೊಂದಿದ ಘಟನೆ ಬೆಳಗಾವಿಯಲ್ಲಿ ರವಿವಾರ (ಮೇ.03) ಬೆಳಿಗ್ಗೆ ನಡೆದಿರುವ ದುರ್ಘಟನೆ. ನಗರದ ಪ್ರಸಿದ್ಧ ಕಪಿಲೇಶ್ವರ ದೇವಸ್ಥಾನದ ಹಿಂಭಾಗದಲ್ಲಿರುವ ಹೊಂಡದಲ್ಲಿ ಈಜಲು ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರಿನ ಆಳ ತಿಳಿಯದೆ ಮುಳುಗಿ ಸಾವನ್ನಪ್ಪಿದ್ದಾರೆ. ಪರಶುರಾಮ (11) ಮತ್ತು ಶಿವಂ (9) ಮೃತ ದುರ್ದೈವಿ ಬಾಲಕರು. ಬೇಸಿಗೆಯ ಬಿಸಿಲಿನ ಬೇಗೆಯಿಂದ ಪಾರಾಗಲು ಈ ಬಾಲಕರು ಗುಂಪಾಗಿ ಈಜಲು ಬಂದಿದ್ದರು ಎನ್ನಲಾಗಿದೆ. ಹೊಂಡಕ್ಕೆ ಇಳಿದ ಬಾಲಕರು ಆಳದ ಅಂದಾಜಿಲ್ಲದೆ ಸಿಲುಕಿಕೊಂಡಿದ್ದಾರೆ. ಮೃತ ಯುವಕರು ಶಿವಾಜಿ ನಗರ ಪ್ರದೇಶದ ನಿವಾಸಿಗಳು ಎಂದು ತಿಳಿದುಬಂದಿದೆ. ಕಪಿಲೇಶ್ವರ ಹೊಂಡವು ದಶಕಗಳಿಂದ ಸರಿಯಾದ ನಿರ್ವಹಣೆಯಿಲ್ಲದೆ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಹೊಂಡದ ಸುತ್ತಲೂ ಯಾವುದೇ ಸುರಕ್ಷತಾ ಬೇಲಿ ಅಥವಾ ಎಚ್ಚರಿಕೆ ಫಲಕಗಳಿಲ್ಲದಿರುವುದು ಇಂತಹ ದುರಂತಗಳಿಗೆ ಕಾರಣವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ಖಡೇಬಜಾರ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

