ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದ ಸೋಲಿನ ಪರಾಮರ್ಶೆ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಕೃತಜ್ಞತಾ ಸಮಾವೇಶ ನಡೆಯಿತು.ಚಾಮರಾಜನಗರದ ಅಂಬೇಡ್ಕರ್ ಭವನದಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ಪರಾಮರ್ಶೆ ಮತ್ತು ಪಕ್ಷದ ಕಾರ್ಯಕರ್ತರ ಕೃತಜ್ನತಾ ಸಮಾವೇಶವನ್ನ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಂಗಶೆಟ್ಟಿ ಉದ್ಘಾಟಿಸಿದರು.ಕಾರ್ಯಕ್ರಮದ ಕೇಂದ್ರ ಬಿಂದು ಮಾಜಿ ಸಂಸದ ಆರ್.ದೃವನಾರಾಯಣ್ ಮೊದಲಿಗೆ ಮತದಾರರು ಮತ್ತು ಪಕ್ಷದ ಕಾರ್ಯಕರ್ತರಿಗೆ ಕೃತಜ್ನತೆಗಳನ್ನ ಅರ್ಪಿಸಿದರು. ಸೋಲಿನಿಂದ ನಾನು ದೃತಿಗೆಟ್ಟಿಲ್ಲ, ಮುಂದಿನ ದಿನಗಳಲ್ಲಿ ಪಕ್ಷವನ್ನ ಸಂಘಟಿಸುತ್ತೇನೆ. ಪಕ್ಷವನ್ನ ಸದೃಡ ಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆಂದು ಹೇಳಿದ ಮಾಜಿ ಸಂಸದರು, ನನ್ನ ಸೋಲಿಗೆ ಉಪ್ಪಾರ ಸಮಾಜ ಕಾರಣವಾಗಿದೆ ಎಂದು ಹೇಳುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರನ್ನ ಸೋಲಿಗೆ ಹೊಣೆ ಮಾಡಿದರು. ಪಕ್ಷ ಉಪ್ಪಾರ ಸಮಾಜಕ್ಕೆ ಮಾನ್ಯತೆ ನೀಡಿದೆ, ಉಪ್ಪಾರ ಸಮಾಜದಿಂದ ನಾನು ಹೆಚ್ಚಿನ ಮತಗಳನ್ನ ನಿರೀಕ್ಷೆ ಮಾಡಿದ್ದೇ, ಈ ಚುನಾವಣೆಯ ಉಸ್ತುವಾರಿಯನ್ನ ಪುಟ್ಟರಂಗಶೆಟ್ಟರೇ ಹೊತ್ತಿದ್ದರು ಎಂದರು.ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾಂಗ್ರೆಸ್ ಪಕ್ಷದ ಮುಖಂಡರೆಲ್ಲರೂ ಲೋಕಸಭಾ ಚುನಾವಣೆಯ ಸೋಲಿಗೆ ಪುಟ್ಟರಂಗಶೆಟ್ಟರೇ ಕಾರಣವೆಂದು ಹೇಳುವ ಮೂಲಕ ಸಚಿವರನ್ನ ಮುಜುಗರಕ್ಕೀಡು ಮಾಡಿದರು. ಉಪ್ಪಾರ ಸಮಾಜದ ಬಂಧುಗಳು ಇರುವ ವಾರ್ಡ್ ಗಳಿಗೆ ಹೆಚ್ಚಿನ ಅನುದಾನ ನೀಡಲಾಗಿತ್ತು, ಲೋಕಸಭಾ ವ್ಯಾಪ್ತಿಯ ಎಂಟು ವಿಧಾನ ಸಭಾ ಕ್ಷೇತ್ರಗಳಲ್ಲಿ ಐದು ವಿಧಾನ ಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹೆಚ್ಚಿನ ಮತಗಳನ್ನ ತಂದು ಕೊಟ್ಟಿದೆ, ಆದರೆ ಚಾಮರಾಜನಗರೆ ಕ್ಷೇತ್ರದಲ್ಲಿ ಹಿನ್ನಡೆಯಾಗಿದೆ, ಇದರ ಹೊಣೆಯನ್ನ ಪುಟ್ಟರಂಗಶೆಟ್ಟರೇ ಹೊರಬೇಕೆಂದು ಮುಖಂಡರುಗಳು ಹರಿಹಾಯ್ದರು.ಒಟ್ಟಾರೆ ಚಾಮರಾಜನಗರದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಂಗಶೆಟ್ಟರನ್ನೇ ಲೋಕಸಭಾ ಚುನಾವಣಾ ಸೋಲಿಗೆ ಹೊಣೆ ಮಾಡಲಾಯಿತು. ವೇದಿಕೆಯಲ್ಲಿದ್ದ ಸಚಿವರಿಗೆ ಇದು ಇರುಸು ಮುರುಸು ಉಂಟು ಮಾಡಿತು.
bigtvnews | Hubli Dharwad News | Kannada News | Karnataka News Hubli News | News In Hubli | Local news





