ನಗರದ ಹಳೆಯ ಕೆಸರೆ ಬಡಾವಣೆಯಲ್ಲಿ ಬುಧವಾರ ತಡರಾತ್ರಿ ಪತಿಯೇ ಪತ್ನಿಯನ್ನು ಕೊಲೆ ಮಾಡಿದ್ದಾನೆ. ಪುಷ್ಪಾ (24) ಮೃತ ಗೃಹಿಣಿ. ಆಕೆಯ ಪತಿ ಮಹೇಶ್ ಕೊಲೆ ಮಾಡಿದ ಆರೋಪಿ. ಪುಷ್ಪಾ ಹಾಗೂ ಮಹೇಶ್ ಒಂದೂವರೆ ವರ್ಷದ ಹಿಂದೆ ಮದುವೆ ಆಗಿದ್ದರು. ಇಬ್ಬರೂ ಹಳೇ ಕೆಸರೆಯ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಪುಷ್ಪಾ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಶಾಪ್ ಬಾಗಿಲು ಹಾಕುವುದು ತಡವಾಗುತ್ತಿದ್ದ ಕಾರಣ ನಿತ್ಯವೂ ತಡವಾಗಿ ಮನೆಗೆ ಬರುತ್ತಿದ್ದಳು. ಇದೇ ವಿಚಾರಕ್ಕೆ ಗಂಡ- ಹೆಂಡತಿ ನಡುವೆ ಗಲಾಟೆ ನಡೆದಿತ್ತು. ಹಿರಿಯರು ರಾಜಿ ಸಂಧಾನ ಮಾಡಿಸಿದ್ದರು. ಮತ್ತೆ ಬುಧವಾರ ಮಧ್ಯರಾತ್ರಿ ಗಲಾಟೆ ನಡೆದಿದೆ. ಈ ವೇಳೆ ಪುಷ್ಪಾ ತಮ್ಮ ಸಹೋದರನಿಗೆ ಕರೆ ಮಾಡಿ ಗಲಾಟೆ ವಿಚಾರ ತಿಳಿಸಿದ್ದಾರೆ. ಈ ವೇಳೆ ತಾಳ್ಮೆ ಕಳೆದುಕೊಂಡ ಮಹೇಶ್ ಮನೆಯಲ್ಲಿದ್ದ ಕೊಡಲಿಯಿಂದ ಪುಷ್ಪಾಗೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ. ಬಳಿಕ ತಲೆ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ. ಈ ಸಂಬಂಧ ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

