ಹುಬ್ಬಳ್ಳಿ :ಮಧ್ಯರಾತ್ರಿ ಸುಮಾರು 1 ಗಂಟೆ ವೇಳೆಗೆ ಮೂವರು ದುಷ್ಕರ್ಮಿಗಳು ಜೈನ ಮಂದಿರಕ್ಕೆ ನುಗ್ಗಿದ್ದಾರೆ. ಕೃತ್ಯ ಎಸಗುವ ಮುನ್ನ ಅವರು ದೇವಸ್ಥಾನದ ಭದ್ರತಾ ಸೈರನ್ ವ್ಯವಸ್ಥೆಯನ್ನು ಸಂಪೂರ್ಣವಾಗಿ ಬಂದ್ ಮಾಡಿದ್ದಾರೆ. ನಂತರ ಒಳನುಗ್ಗಲು ಅನುಕೂಲವಾಗುವಂತೆ ಸಿಸಿಟಿವಿ ಕ್ಯಾಮೆರಾಗಳ ಕೇಬಲ್‌ಗಳನ್ನು ಕತ್ತರಿಸಿದ್ದಾರೆ. ಈ ತಾಂತ್ರಿಕ ವ್ಯವಸ್ಥೆಗಳನ್ನು ನಿಷ್ಕ್ರಿಯಗೊಳಿಸಿದ ಬಳಿಕ ಮಂದಿರದ ಮುಖ್ಯ ಬಾಗಿಲನ್ನು ಮುರಿದು ಒಳಪ್ರವೇಶಿಸಿದ್ದಾರೆ. ಗರ್ಭಗುಡಿಯಲ್ಲಿದ್ದ ದೇವರಿಗೆ ಅಲಂಕಾರ ಮಾಡಲಾಗಿದ್ದ ಬೆಳ್ಳಿಯ ಪ್ರಭಾವಳಿ, ಮುಕುಟ ಸೇರಿದಂತೆ ಒಟ್ಟು 3 ಕೆಜಿ ತೂಕದ ಬೆಳ್ಳಿ ಸಾಮಗ್ರಿಗಳು ಹಾಗೂ ಚಿನ್ನದ ಆಭರಣಗಳನ್ನು ಕಳ್ಳರು ಚೀಲಕ್ಕೆ ತುಂಬಿಸಿಕೊಂಡಿದ್ದಾರೆ. ಬುಧವಾರ ಮುಂಜಾನೆ ಅರ್ಚಕರು ಮತ್ತು ಭಕ್ತರು ದೇವಸ್ಥಾನದ ಬಾಗಿಲು ತೆರೆದಾಗ ಈ ಭಾರಿ ಕಳ್ಳತನದ ಕೃತ್ಯ ಬೆಳಕಿಗೆ ಬಂದಿದೆ. ಹುಬ್ಬಳ್ಳಿಯ ಅತ್ಯಂತ ಜನನಿಬಿಡ ಪ್ರದೇಶದಲ್ಲೇ ಈ ಘಟನೆ ನಡೆದಿರುವುದರಿಂದ ಜೈನ ಸಮುದಾಯದ ಭಕ್ತರಲ್ಲಿ ತೀವ್ರ ಆತಂಕ ಸೃಷ್ಟಿಯಾಗಿದೆ. ಕಳ್ಳತನದ ಮಾಹಿತಿ ಲಭಿಸುತ್ತಿದ್ದಂತೆ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಬೆರಳಚ್ಚು ತಜ್ಞರು ಹಾಗೂ ಶ್ವಾನದಳದ ನೆರವನ್ನು ಪಡೆಯಲಾಗುತ್ತಿದ್ದು, ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಳ್ಳರ ಪತ್ತೆಗಾಗಿ ಜಾಲ ಬೀಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

