ಬೆಳಗಾವಿ ನಗರದ ಉದ್ಯಮಭಾಗ ಕೈಗಾರಿಕಾ ಪ್ರದೇಶದಲ್ಲಿ ಕಸ ವಿಂಗಡಣೆ ಮಾಡುತ್ತಿದ್ದ ಪೌರಕಾರ್ಮಿಕರಿಗೆ ಕಸದ ರಾಶಿಯಲ್ಲಿ 59 ಬಳಕೆಯಾದ ಗುಂಡುಗಳು ಪತ್ತೆಯಾಗಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಗುಂಡುಗಳನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದರು. ಪ್ರಾಥಮಿಕ ತನಿಖೆಯಲ್ಲಿ ಈ ಗುಂಡುಗಳು ವಿಜಯಪುರ ಮೂಲದ ಮಾಜಿ ಸೈನಿಕನಿಗೆ ಸೇರಿದ್ದವು ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಸಂಬಂಧಿಕರ ಮಕ್ಕಳಿಗೆ ತೋರಿಸಲು ಅವುಗಳನ್ನು ಬೆಳಗಾವಿಯ ಮನೆಯೊಂದಕ್ಕೆ ತಂದಿದ್ದ ಅವರು, ಬಳಿಕ ಮನೆ ಬಿಡುವಾಗ ಅಲ್ಲೇ ಬಿಟ್ಟು ಹೋಗಿದ್ದರು. ನಂತರ ಮನೆ ಖಾಲಿ ಮಾಡುವ ವೇಳೆ ಅವುಗಳ ಮಹತ್ವ ಅರಿಯದ ಸಂಬಂಧಿಕರು ಕಸದೊಂದಿಗೆ ತಿಪ್ಪೆಗೆ ಎಸೆದಿದ್ದಾರೆ ಎನ್ನಲಾಗಿದೆ. ಪತ್ತೆಯಾದ ಎಲ್ಲಾ 59 ಗುಂಡುಗಳೂ ಈಗಾಗಲೇ ಬಳಕೆಯಾದ ಖಾಲಿ ಕಾರ್ಟ್ರಿಡ್ಜ್‌ಗಳಾಗಿದ್ದು, ಸಾರ್ವಜನಿಕರಿಗೆ ಯಾವುದೇ ಅಪಾಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಆದರೂ ಗುಂಡುಗಳು ಮಾಜಿ ಸೈನಿಕನ ಬಳಿ ಹೇಗೆ ಬಂದವು ಮತ್ತು ಏಕೆ ಸಂಗ್ರಹಿಸಲಾಗಿತ್ತು ಎಂಬ ಬಗ್ಗೆ ಹೆಚ್ಚಿನ ತನಿಖೆ ಮುಂದುವರಿದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

