ಗೋವಾದಿಂದ ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಅಂತರರಾಜ್ಯ ಜಾಲವನ್ನು ವಿಜಯಪುರ ಪೊಲೀಸರು ಭೇದಿಸಿದ್ದಾರೆ. ಕೊಲ್ಹಾರ ಟೋಲ್ ಬಳಿ ಖಚಿತ ಮಾಹಿತಿ ಮೇರೆಗೆ ಟ್ರಕ್ ತಪಾಸಣೆ ನಡೆಸಿದ ವೇಳೆ ಎರೆಹುಳ ಗೊಬ್ಬರದ ಚೀಲಗಳ ಕೆಳಗೆ ಅಡಗಿಸಿಟ್ಟಿದ್ದ ಗೋವಾ ಮದ್ಯ ಪತ್ತೆಯಾಗಿದೆ. ಆರಂಭದಲ್ಲಿ ಟ್ರಕ್‌ನಲ್ಲಿ ಗೊಬ್ಬರ ಮಾತ್ರ ಇದೆ ಎಂದು ಚಾಲಕರು ಪೊಲೀಸರನ್ನು ದಾರಿ ತಪ್ಪಿಸಲು ಯತ್ನಿಸಿದ್ದರು. ಪೊಲೀಸರ ತನಿಖೆಯಲ್ಲಿ ಖದೀಮರು ಅತ್ಯಂತ ಚಾಣಾಕ್ಷತನದಿಂದ ಮದ್ಯ ಸಾಗಾಟ ನಡೆಸುತ್ತಿದ್ದದ್ದು ಬೆಳಕಿಗೆ ಬಂದಿದೆ. ಮಾರ್ಗದ ಮಾಹಿತಿ ಸೋರಿಕೆಯಾಗದಂತೆ ಹಂತ ಹಂತವಾಗಿ ಹಲವು ಚಾಲಕರನ್ನು ಬದಲಾಯಿಸಲಾಗುತ್ತಿತ್ತು. ಪ್ರತಿಯೊಬ್ಬ ಚಾಲಕನಿಗೂ ನಿರ್ದಿಷ್ಟ ಜಿಪಿಎಸ್ ಲೊಕೇಶನ್‌ವರೆಗೆ ಮಾತ್ರ ವಾಹನ ಚಲಾಯಿಸುವ ಜವಾಬ್ದಾರಿ ನೀಡಲಾಗುತ್ತಿತ್ತು. ಈ ತಂತ್ರದಿಂದ ಟ್ರಕ್ ಬೆಳಗಾವಿ, ಧಾರವಾಡ ಮತ್ತು ಬಾಗಲಕೋಟೆ ಜಿಲ್ಲೆಗಳನ್ನು ದಾಟಿ ಬಂದಿತ್ತು. ವಿಜಯಪುರ ಜಿಲ್ಲೆಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು 1.31 ಕೋಟಿ ರೂ. ಮೌಲ್ಯದ ಗೋವಾ ಮದ್ಯ ಹಾಗೂ ಟ್ರಕ್ ಸೇರಿ ಒಟ್ಟು 1.65 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದ್ದಾರೆ. ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಲಾಗಿದ್ದು, ಈ ಅಂತರರಾಜ್ಯ ಮದ್ಯ ದಂಧೆಯ ಹಿಂದಿರುವ ಪ್ರಮುಖ ಸೂತ್ರಧಾರರ ಪತ್ತೆಗೆ ತನಿಖೆ ಮುಂದುವರಿದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

